Snap Values

ಮಾನವ ಹಕ್ಕುಗಳಿಗೆ Snap ನ ಬದ್ಧತೆ

ಸಮುದಾಯದ ಮಾರ್ಗಸೂಚಿಗಳ ವಿವರಣಾ ಸರಣಿ

ನವೀಕರಿಸಲಾಗಿರುವುದು : ಅಕ್ಟೋಬರ್ 2025

ವ್ಯವಹಾರ ಮತ್ತು ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಮಾರ್ಗದರ್ಶಕ ತತ್ವಗಳಲ್ಲಿ (UNGP ಗಳು) ಹೇಳಲಾಗಿರುವಂತೆ ಮಾನವ ಹಕ್ಕುಗಳನ್ನು ಗೌರವಿಸಲು Snap ಬದ್ಧವಾಗಿದೆ. ಈ ಕೆಳಗಿನ ಕ್ರಮಗಳ ಮೂಲಕ ಸೇರಿದಂತೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು, ವಿಷಯ ನಿಯಂತ್ರಣ ಅಭ್ಯಾಸಗಳು, ಪಾರದರ್ಶಕತೆಯ ವರದಿ ಮಾಡುವಿಕೆ ಮತ್ತು ಗೌಪ್ಯತೆ ಅಭ್ಯಾಸಗಳಲ್ಲಿ ಮಾನವ ಹಕ್ಕುಗಳ ಪರಿಗಣನೆಯನ್ನು ನಾವು ಅಳವಡಿಸಿದ್ದೇವೆ:

  • ಕಮ್ಯುನಿಟಿ ಮಾರ್ಗಸೂಚಿಗಳು. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸಂಬಂಧಿತ ವಿವರಣೆ ಲೇಖನಗಳ ಮೂಲಕ ನಮ್ಮ ವೇದಿಕೆಯಲ್ಲಿ ಯಾವುದಕ್ಕೆ ಅವಕಾಶವಿದೆ ಮತ್ತು ಯಾವುದಕ್ಕೆ ಅವಕಾಶವಿಲ್ಲ ಎನ್ನುವ ಕುರಿತು ನಾವು ಪಾರದರ್ಶಕರಾಗಿದ್ದೇವೆ ಮತ್ತು ಸ್ಥಳೀಯ ಭಾಷೆ ಮತ್ತು ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡು ಮತ್ತು ಬಳಕೆದಾರರಿಗೆ ಮೇಲ್ಮನವಿಯ ಪ್ರಕ್ರಿಯೆ ಹಾಗೂ ಬೆಂಬಲ ಸಂಪನ್ಮೂಲಗಳನ್ನು ಒದಗಿಸುವ ಜೊತೆಗೆ ಈ ನೀತಿಗಳನ್ನು ನ್ಯಾಯಸಮ್ಮತ ಮತ್ತು ಸಮಾನ ರೀತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಸುರಕ್ಷತಾ ತಂಡಗಳ ಜೊತೆಗೆ ಕೆಲಸ ಮಾಡುತ್ತೇವೆ.

  • ಪಾರದರ್ಶಕತೆ. ಇತರ ಕಾನೂನುಬದ್ಧವಾಗಿ ಅಗತ್ಯವಿರುವ ಪಾರದರ್ಶಕತೆಯ ವರದಿಗಳ ಜೊತೆಗೆ, ಸುರಕ್ಷತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ನಮ್ಮ ಬದ್ಧತೆಯ ಭಾಗವಾಗಿ ವರ್ಷಕ್ಕೆ ಎರಡು ಬಾರಿ ನಾವು ಸ್ವಯಂಪ್ರೇರಣೆಯಿಂದ ಪಾರದರ್ಶಕತೆಯ ವರದಿಗಳನ್ನು ಪ್ರಕಟಿಸುತ್ತೇವೆ. ನಮ್ಮ ಪಾಲುದಾರರಿಗೆ ಈ ವರದಿಗಳು ಹೆಚ್ಚು ಸಮಗ್ರ ಮತ್ತು ಮಾಹಿತಿಯುಕ್ತವಾಗಿರುವಂತೆ ಮಾಡಲು ನಾವು ನಿರಂತರ ಪರಿಶ್ರಮ ಪಡುತ್ತೇವೆ.

  • ಗೌಪ್ಯತೆ. ನಮ್ಮ ಗೌಪ್ಯತೆ ನೀತಿ, ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಡೇಟಾ ಸಂರಕ್ಷಣಾ ನಿಯಮಗಳ ಮೂಲಕ ಬಳಕೆದಾರ ಡೇಟಾ ಮತ್ತು ಗೌಪ್ಯತೆಯನ್ನು ನಾವು ರಕ್ಷಿಸುತ್ತೇವೆ. ನಮ್ಮ ವೇದಿಕೆಯಲ್ಲಿ ಅಥವಾ ನಮ್ಮ ಸೇವೆಗಳ ಮೂಲಕ ಇತರರ ಗೌಪ್ಯತೆಯನ್ನು ಉಲ್ಲಂಘಿಸದಂತೆ ಬಳಕೆದಾರರನ್ನು ನಾವು ನಿಷೇಧಿಸುತ್ತೇವೆ ಮತ್ತು ಬಳಕೆದಾರ ಡೇಟಾ ಪ್ರವೇಶ ಮಾಡಲು ನಾವು ಕಟ್ಟುನಿಟ್ಟಿನ ಗೌಪ್ಯತೆಯ ತತ್ವಗಳನ್ನು ಹೊಂದಿದ್ದೇವೆ. 

  • ಅಭಿವ್ಯಕ್ತಿ ಸ್ವಾತಂತ್ರ್ಯ. ಬಳಕೆದಾರರು ತಮ್ಮನ್ನು ಸೃಜನಶೀಲವಾಗಿ ಮತ್ತು ನೈಜವಾಗಿ ಅಭಿವ್ಯಕ್ತಪಡಿಸಲು ನಾವು ಅವಕಾಶ ಕಲ್ಪಿಸುತ್ತೇವೆ ಮತ್ತು ವಿಷಯ ತೆಗೆದುಹಾಕುವ ಅಥವಾ ಖಾತೆಗಳ ವಿರುದ್ಧ ಕ್ರಮ ಜಾರಿಗೊಳಿಸುವ ಮೊದಲು, ಸ್ಥಳೀಯ ಭಾಷೆ ಮತ್ತು ಸಾಂಸ್ಕೃತಿಕ ಸನ್ನಿವೇಶ ಹಾಗೂ ಶೈಕ್ಷಣಿಕ, ಸುದ್ದಿಯೋಗ್ಯ ಅಥವಾ ಸಾರ್ವಜನಿಕರಿಗೆ ಮೌಲ್ಯ ಹೊಂದಿರಬಹುದಾದ ವಿಷಯವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. 

  • ಭಯೋತ್ಪಾದನೆ ವಿರೋಧಿ. ಭಯೋತ್ಪಾದಕ ಮತ್ತು ಹಿಂಸಾತ್ಮಕ ತೀವ್ರವಾದದ ಘಟಕಗಳನ್ನು ನಮ್ಮ ವೇದಿಕೆ ಬಳಸದಂತೆ ನಿಷೇಧಿಸಲಾಗಿದೆ. ಸೈದ್ಧಾಂತಿಕ ಗುರಿಗಳನ್ನು ಮುನ್ನಡೆಸಲು ವ್ಯಕ್ತಿಗಳು ಅಥವಾ ಗುಂಪುಗಳು ಮಾಡಿದ ಭಯೋತ್ಪಾದನೆ ಅಥವಾ ಇತರ ಹಿಂಸಾತ್ಮಕ ಅಥವಾ ಅಪರಾಧ ಕೃತ್ಯಗಳನ್ನು ಪ್ರಚಾರ ಮಾಡುವ ವಿಷಯವನ್ನು ಹಾಗೂ ವಿದೇಶಿ ಭಯೋತ್ಪಾದಕ ಸಂಘಟನೆಗಳನ್ನು ಅಥವಾ ಹಿಂಸಾತ್ಮಕ ತೀವ್ರವಾದದ ಗುಂಪುಗಳನ್ನು ಬೆಂಬಲಿಸುವ ವಿಷಯವನ್ನು ಕೂಡ ನಾವು ನಿಷೇಧಿಸುತ್ತೇವೆ.

  • ಮಾನವ ಕಳ್ಳಸಾಗಣೆ ವಿರೋಧಿ. ಲೈಂಗಿಕತೆಗಾಗಿ ಮಾನವ ಕಳ್ಳಸಾಗಣೆ, ಜೀತ ಪದ್ಧತಿ, ಬಲವಂತದ ಅಪರಾಧ ಚಟುವಟಿಕೆ, ಅಂಗಾಂಗ ಕಳ್ಳಸಾಗಣೆ ಮತ್ತು ಬಲವಂತದ ವಿವಾಹ ಸೇರಿದಂತೆ, ಮಾನವ ಕಳ್ಳಸಾಗಣೆಗಾಗಿ ನಮ್ಮ ವೇದಿಕೆ ಅಥವಾ ಸೇವೆಗಳನ್ನು ಬಳಸದಂತೆ ನಾವು ನಿಷೇಧಿಸುತ್ತೇವೆ. 

  • ತಾರತಮ್ಯ ವಿರೋಧಿ. ದ್ವೇಷಮಯ ನಡವಳಿಕೆಯ ವಿರುದ್ಧ ನಮ್ಮ ನೀತಿಗಳ ಮೂಲಕ ನಮ್ಮ ವೇದಿಕೆಯಲ್ಲಿ ನಾವು ತಾರತಮ್ಯವನ್ನು ನಿಷೇಧಿಸುತ್ತೇವೆ, ಇದು ಜನಾಂಗ, ಬಣ್ಣ, ಜಾತಿ, ಕುಲ, ರಾಷ್ಟ್ರೀಯ ಮೂಲ, ಧರ್ಮ, ಲೈಂಗಿಕ ಒಲವು, ಲಿಂಗ ಗುರುತು, ವೈಕಲ್ಯ ಅಥವಾ ಸೇನಾನಿವೃತ್ತರ ಸ್ಥಾನಮಾನ, ವಲಸೆ ಸ್ಥಾನಮಾನ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ವಯಸ್ಸು, ತೂಕ ಅಥವಾ ಗರ್ಭಾವಸ್ಥೆಯ ಸ್ಥಿತಿ ಆಧರಿಸಿ ಅವಹೇಳನ ಮಾಡುವ, ಅವಮಾನಿಸುವ ಅಥವಾ ತಾರತಮ್ಯ ಅಥವಾ ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ.

  • ಕಾನೂನು ಜಾರಿಗೊಳಿಸುವಿಕೆ ಮತ್ತು ನಾಗರಿಕ ಸಮಾಜದ ಜೊತೆ ಕೆಲಸ ಮಾಡುವುದು. ಉದಯೋನ್ಮುಖ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು, ನಮ್ಮ ನೀತಿಗಳು ಮತ್ತು ವಿಷಯ ನಿಯಂತ್ರಣ ಪ್ರಕ್ರಿಯೆಗಳಲ್ಲಿ ಪ್ರತಿಕ್ರಿಯೆಯನ್ನು ಅಳವಡಿಸಿಕೊಳ್ಳಲು ಮತ್ತು ನಮ್ಮ ವೇದಿಕೆಯಲ್ಲಿ ಸುರಕ್ಷತೆಯನ್ನು ಪ್ರೋತ್ಸಾಹಿಸಲು ವಿಶ್ವಾದ್ಯಂತದ ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, NGO ಗಳು ಮತ್ತು ಶಿಕ್ಷಣ ತಜ್ಞರೊಂದಿಗೆ Snap ಕೆಲಸ ಮಾಡುತ್ತದೆ.