ಸೆನೆಟ್ ಸಮಾವೇಶದ ಸಾಕ್ಷ್ಯ — ಸುರಕ್ಷತೆ, ಗೌಪ್ಯತೆ ಮತ್ತು ಯೋಗಕ್ಷೇಮ ಕುರಿತ ನಮ್ಮ ನಿಲುವು

ಅಕ್ಟೋಬರ್ 26, 2021

ಇಂದು, ನಮ್ಮ ಜಾಗತಿಕ ಸಾರ್ವಜನಿಕ ನೀತಿಯ ಉಪಾಧ್ಯಕ್ಷೆ ಜೆನ್ನಿಫರ್ ಸ್ಟೌಟ್, ನಮ್ಮ ವೇದಿಕೆಯಲ್ಲಿ ಯುವಜನರನ್ನು ರಕ್ಷಿಸುವ Snap ನ ಧೋರಣೆಯ ಕುರಿತು ಸೆನೆಟ್‌ನ ವಾಣಿಜ್ಯ ಸಮಿತಿಯ ಗ್ರಾಹಕ ರಕ್ಷಣೆ, ಉತ್ಪನ್ನ ಸುರಕ್ಷತೆ ಮತ್ತು ಡೇಟಾ ಭದ್ರತೆಗೆ ಸಂಬಂಧಿಸಿದ ಉಪಸಮಿತಿಯೆದುರು ಸಾಕ್ಷ್ಯ ನುಡಿಯಲು ಇತರ ತಂತ್ರಜ್ಞಾನ ವೇದಿಕೆಗಳ ಜೊತೆಗೂಡಿದರು. 

ನಾವು ಉದ್ದೇಶಪೂರ್ವಕವಾಗಿ Snapchat ಅನ್ನು ಇತರ ಸಾಂಪ್ರದಾಯಿಕ ಸಾಮಾಜಿಕ ವೇದಿಕೆಗಳಿಗಿಂತ ಹೇಗೆ ಭಿನ್ನವಾಗಿ ನಿರ್ಮಿಸಿದೆವು, ನಮ್ಮ ವೇದಿಕೆ ಮತ್ತು ಉತ್ಪನ್ನಗಳ ವಿನ್ಯಾಸದೊಳಗೆ ನೇರವಾಗಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಅಳವಡಿಸಲು ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಮತ್ತು ನಮ್ಮ ಸಮುದಾಯದ ಯೋಗಕ್ಷೇಮವನ್ನು ಇನ್ನಷ್ಟು ಉತ್ತಮವಾಗಿ ರಕ್ಷಿಸಲು ನಾವು ಎಲ್ಲಿ ಸುಧಾರಣೆಯನ್ನು ಮುಂದುವರಿಸಬೇಕಿದೆ ಎನ್ನುವುದನ್ನು ಉಪಸಮಿತಿಯೆದುರು ವಿವರಿಸುವ ಅವಕಾಶ ಒದಗಿಸಿದ್ದಕ್ಕಾಗಿ ನಾವು ಋಣಿಯಾಗಿದ್ದೇವೆ. ಅವರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವ ನೈತಿಕ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಎಂದು ನಾವು ಯಾವಾಗಲೂ ಭಾವಿಸಿದ್ದೇವೆ — ಮತ್ತು ಎಲ್ಲ ತಂತ್ರಜ್ಞಾನ ಕಂಪನಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ತಾವು ಸೇವೆ ಸಲ್ಲಿಸುವ ಸಮುದಾಯಗಳನ್ನು ಸಕ್ರಿಯವಾಗಿ ರಕ್ಷಿಸಬೇಕು ಎಂದು ನಂಬುತ್ತೇವೆ. 

ಈ ನಿರ್ಣಾಯಕ ಸಮಸ್ಯೆಗಳನ್ನು ತನಿಖೆ ಮಾಡಲು ಉಪಸಮಿತಿಯ ನಿರಂತರ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ — ಮತ್ತು ಜೆನ್ನಿಫರ್ ಅವರ ಪೂರ್ಣ ಪ್ರಾಸ್ತಾವಿಕ ಹೇಳಿಕೆಯನ್ನು ನೀವು ಕೆಳಗೆ ಓದಬಹುದು. ಪೂರ್ಣ ಸಾಕ್ಷ್ಯದ PDF ಇಲ್ಲಿ ಲಭ್ಯವಿದೆ.

****

Snap Inc ಜಾಗತಿಕ ಸಾರ್ವಜನಿಕ ನೀತಿಯ ಉಪಾಧ್ಯಕ್ಷೆ ಜೆನ್ನಿಫರ್ ಸ್ಟೌಟ್‌ರ ಸಾಕ್ಷ್ಯ

ಪ್ರಸ್ತಾವನೆ

Blumenthal ಅಧ್ಯಕ್ಷರೇ, Blackburn ನ ಗೌರವಾನ್ವಿತ ಸದಸ್ಯರೇ ಮತ್ತು ಉಪಸಮಿತಿಯ ಸದಸ್ಯರೇ, ನಿಮ್ಮ ಎದುರು ಹಾಜರಾಗಲು ಇಂದು ಅವಕಾಶ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನನ್ನ ಹೆಸರು ಜೆನ್ನಿಫರ್ ಸ್ಟೌಟ್ ಮತ್ತು ನಾನು Snapchat ನ ಮಾತೃಸಂಸ್ಥೆಯಾಗಿರುವ Snap Inc. ನಲ್ಲಿ ಜಾಗತಿಕ ಸಾರ್ವಜನಿಕ ನೀತಿಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸೆನೆಟ್ ಸಿಬ್ಬಂದಿಯಾಗಿ ಸಾರ್ವಜನಿಕ ಸೇವೆಯಲ್ಲಿ ಮೊದಲ ಬಾರಿ ಕಾರ್ಯ ಆರಂಭಿಸಿದ 23 ವರ್ಷಗಳ ಬಳಿಕ ಸೆನೆಟ್‌ಗೆ ಮರಳುತ್ತಿರುವುದು ಗೌರವ ಮತ್ತು ಸೌಭಾಗ್ಯದ ಸಂಗತಿಯಾಗಿದೆ, ಈ ಬಾರಿ ಸಾಕಷ್ಟು ಭಿನ್ನ ಸಾಮರ್ಥ್ಯದಲ್ಲಿ — ಗೌಪ್ಯತೆ ಮತ್ತು ಸುರಕ್ಷತೆ ಕುರಿತು Snap ನ ನಿಲುವಿನ ಬಗ್ಗೆ, ವಿಶೇಷವಾಗಿ ಅದು ನಮ್ಮ ಅತಿ ಕಿರಿಯ ಯುವ ಸಮುದಾಯದ ಜನರಿಗೆ ಸಂಬಂಧಿಸಿರುವುದರಿಂದ ಆ ಕುರಿತು ಮಾತನಾಡಲು ಆಗಮಿಸಿದ್ದೇನೆ. ಸುಮಾರು ಹತ್ತು ವರ್ಷಗಳಿಗಿಂತ ಹೆಚ್ಚು ಸಮಯ ಅಮೆರಿಕದ ಶಾಸನಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೂ ಸೇರಿದಂತೆ, ಸುಮಾರು ಎರಡು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸಿದ ಬಳಿಕ, ನಾನು ಸುಮಾರು ಐದು ವರ್ಷಗಳಿಂದ ಈ ಹುದ್ದೆಯಲ್ಲಿದ್ದೇನೆ. ನಾನು ಈ ಸಂಸ್ಥೆಯ ಬಗ್ಗೆ ಹಾಗೂ ನಮ್ಮ ಯುವಜನರು ಸುರಕ್ಷಿತ ಮತ್ತು ಆರೋಗ್ಯಕರ ಆನ್‌ಲೈನ್ ಅನುಭವಗಳನ್ನು ಹೊಂದಿದ್ದಾರೆ ಎನ್ನುವುದನ್ನು ನಮ್ಮ ತಂತ್ರಜ್ಞಾನ ವೇದಿಕೆಗಳು ಖಚಿತಪಡಿಸಿಕೊಳ್ಳುತ್ತವೆ ಎಂದು ದೃಢಪಡಿಸಿಕೊಳ್ಲಲು ನೀವು ಮತ್ತು ನಿಮ್ಮ ಸಿಬ್ಬಂದಿ ಮಾಡುತ್ತಿರುವ ಕೆಲದ ಬಗ್ಗೆ ನಾನು ಅತ್ಯಂತ ಗೌರವ ಹೊಂದಿದ್ದೇನೆ. 

ನಮ್ಮ ವೇದಿಕೆಯಲ್ಲಿ ಯುವ ಜನರನ್ನು ರಕ್ಷಿಸುವುದಕ್ಕಾಗಿ Snap ನ ನಿಲುವನ್ನು ಅರ್ಥಮಾಡಿಕೊಳ್ಳಲು, ಆರಂಭದಿಂದ ಶುರು ಮಾಡುವುದು ಸಹಾಯಕವಾಗಬಲ್ಲದು. Snapchat ನ ಸಂಸ್ಥಾಪಕರು ಸಾಮಾಜಿಕ ಮಾಧ್ಯಮದೊಂದಿಗೆ ಬೆಳೆದ ಮೊದಲ ಪೀಳಿಗೆಯ ಭಾಗವಾಗಿದ್ದರು. ಅವರ ಅನೇಕ ಸಹವರ್ತಿಗಳಂತೆ, ಸಕಾರಾತ್ಮಕ ಪ್ರಭಾವ ಬೀರಲು ಸಾಮಾಜಿಕ ಮಾಧ್ಯಮ ಸಮರ್ಥವಾಗಿರುವ ರೀತಿಯಲ್ಲೇ, ಅವರ ಸ್ನೇಹದ ಮೇಲೆ ನಕಾರಾತ್ಮಕ ಪ್ರಭಾವ ಬೀಡಿದ ಕೆಲವು ವೈಶಿಷ್ಟ್ಯಗಳನ್ನೂ ಅದು ಹೊಂದಿದೆ ಎಂಬುದನ್ನು ಅವರು ಗಮನಿಸಿದರು. ಈ ವೇದಿಕೆಗಳು ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಶಾಶ್ವತವಾಗಿ ಸಾರ್ವಜನಿಕವಾಗಿ ಪ್ರಸಾರ ಮಾಡಲು ಜನರನ್ನು ಪ್ರೋತ್ಸಾಹಿಸಿದವು. ಸಾಮಾಜಿಕ ಒತ್ತಡದ ಕಾರಣದಿಂದಾಗಿ ಪರಿಪೂರ್ಣವಾಗಿ ಕ್ಯೂರೇಟ್ ಮಾಡಿದ ಚಿತ್ರಗಳು ಮತ್ತು ಜಾಗರೂಕತೆಯಿಂದ ಬರೆದ ತಮ್ಮ ಕಂಟೆಂಟ್ ಮೂಲಕ ತಮ್ಮನ್ನು ಅಭಿವ್ಯಕ್ತಪಡಿಸಲು ಪ್ರಯತ್ನಿಸುತ್ತ, "ಲೈಕ್‌ಗಳು" ಮತ್ತು ಕಾಮೆಂಟ್‌ಗಳ ಮೂಲಕ ಇತರರೊಂದಿಗೆ ಜನರು ಹೇಗೆ ನಿರಂತರವಾಗಿ ತಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಮ್ಮ ಸ್ಥಾಪಕರು ಗಮನಿಸಿದರು. ಸಾಮಾಜಿಕ ಮಾಧ್ಯಮವು ಪರಿಶೀಲಿಸದೆ ಇರುವ ಕಂಟೆಂಟ್‌ನ ಕೊನೆಯಿಲ್ಲದ ಫೀಡ್ ಒದಗಿಸುವ ವೈಶಿಷ್ಟ್ಯವನ್ನೂ ಅನ್ವೇಷಿಸಿತು, ಈ ಮೂಲಕ ವೈರಲ್ ಆದ, ದಾರಿತಪ್ಪಿಸುವ ಮತ್ತು ಹಾನಿಕಾರಕ ಕಂಟೆಂಟ್‌ನ ಪ್ರವಾಹಕ್ಕೆ ಜನರು ಒಡ್ಡಿಕೊಳ್ಳುವಂತೆ ಮಾಡಿತು. 

Snapchat ಅನ್ನು ಸಾಮಾಜಿಕ ಮಾಧ್ಯಮಕ್ಕೆ ಔಷಧದ ರೀತಿ ನಿರ್ಮಿಸಲಾಯಿತು. ವಾಸ್ತವದಲ್ಲಿ, ನಾವು ನಮ್ಮನ್ನು ಕ್ಯಾಮೆರಾ ಕಂಪನಿ ಎಂದು ಕರೆದುಕೊಳ್ಳುತ್ತೇವೆ. ಕೇವಲ ಸುಂದರ ಮತ್ತು ಪರಿಪೂರ್ಣ ಕ್ಷಣಗಳನ್ನಷ್ಟೇ ಅಲ್ಲದೆ, ತಮ್ಮ ನೈಜ ಸ್ನೇಹಿತರೊಂದಿಗೆ ಅನುಭವಗಳು ಮತ್ತು ಭಾವನೆಗಳ ಪೂರ್ಣ ಶ್ರೇಣಿಯನ್ನು ಅಭಿವ್ಯಕ್ತಪಡಿಸಲು ಜನರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ Snapchat ನ ಸಂರಚನೆಯನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ಕಂಪನಿಯ ನಿರ್ಮಾಣದ ಆರಂಭಿಕ ದಿನಗಳಲ್ಲಿ, ಆನ್‌ಲೈನ್ ಗೌಪ್ಯತೆ ಮತ್ತು ಸುರಕ್ಷತೆಯನ್ನು ಆದ್ಯತೆಗೊಳಿಸಲು ನಮ್ಮ ತಂಡವು ಹೊಸ ಆವಿಷ್ಕಾರಗಳನ್ನು ಮೂರು ಪ್ರಧಾನ ವಿಧಾನಗಳಲ್ಲಿ ಮುನ್ನಡೆಸಿತ್ತು. 

ಮೊದಲನೆಯದಾಗಿ, ನಾವು ಕಂಟೆಂಟ್ ಫೀಡ್‌ನ ಬದಲು Snapchat ಕ್ಯಾಮೆರಾಗೆ ತೆರೆಯಬೇಕು ಎಂದು ನಿರ್ಧರಿಸಿದೆವು. ಇದು ಪಠ್ಯ ಸಂದೇಶಗಳನ್ನು ಕಳುಹಿಸುವುದಕ್ಕಿಂತ ಹೆಚ್ಚು ತಲ್ಲೀನಗೊಳಿಸುವ ಮತ್ತು ಸೃಜನಶೀಲವಾದ ವಿಧಾನದಲ್ಲಿ ಸ್ನೇಹಿತರು ದೃಶ್ಯಾತ್ಮಕವಾಗಿ ಪರಸ್ಪರ ಸಂವಹನ ನಡೆಸಲು ಖಾಲಿ ಕ್ಯಾನ್ವಾಸ್ ಅನ್ನು ರಚಿಸಿತು. 

ಎರಡನೆಯದಾಗಿ, ನಾವು ಪ್ರಬಲ ಗೌಪ್ಯತೆಯ ತತ್ವಗಳು, ಡೇಟಾ ಕನಿಷ್ಟಗೊಳಿಸುವಿಕೆ ಮತ್ತು ಕ್ಷಣಿಕತೆಯ ವಿಚಾರವನ್ನು ಅಳವಡಿಸಿಕೊಂಡೆವು, ಈ ಮೂಲಕ ಚಿತ್ರಗಳು ಡಿಫಾಲ್ಟ್ ಆಗಿ ಅಳಿಸಲ್ಪಡುವಂತೆ ಮಾಡಿದೆವು. ಇದರಿಂದ ಜನರು ತಮ್ಮ ಸ್ನೇಹಿತರೊಂದಿಗೆ ಉದ್ಯಾನದಲ್ಲಿ ವಿಹರಿಸುತ್ತಿರುವಾಗ ಯಾವ ರೀತಿ ವರ್ತಿಸುತ್ತಾರೋ ಅದೇ ರೀತಿಯಲ್ಲೇ ತಮ್ಮ ನೈಜ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಅವಕಾಶ ಕಲ್ಪಿಸಿತು. ಆನ್‌ಲೈನ್‌ನಲ್ಲಿ ಸಂಭಾಷಣೆಗಳ ದಾಖಲೆಯನ್ನು ಶಾಶ್ವತವಾಗಿಸುವುದನ್ನು ಸಾಮಾಜಿಕ ಮಾಧ್ಯಮ ಸಹಜಗೊಳಿಸಿರಬಹುದು, ಆದರೆ ನೈಜ ಬದುಕಿನಲ್ಲಿ, ಸ್ನೇಹಿತರು ಪ್ರತಿಯೊಂದು ಸಂಭಾಷಣೆಯನ್ನು ಸಾರ್ವಜನಿಕ ಬಳಕೆಗಾಗಿ ಅಥವಾ ಶಾಶ್ವತ ಉಳಿಸಿಕೊಳ್ಳುವಿಕೆಗಾಗಿ ದಾಖಲಿಸಲು ಟೇಪ್ ರೆಕಾರ್ಡರ್‌ಗಳನ್ನು ಬಳಸುವುದಿಲ್ಲ. 

ಮೂರನೆಯದಾಗಿ, ಸಂವಹನ ನಡೆಸುವ ಸಲುವಾಗಿ ಸ್ನೇಹಿತರಾಗಲು ಬಯಸುವ ಇಬ್ಬರೂ Snapchatter ಗಳು ಡಿಫಾಲ್ಟ್ ಆಗಿ ನೈಜ ಬದುಕಿನಲ್ಲಿ ಈಗಾಗಲೇ ಸ್ನೇಹಿತರಾಗಿರಬೇಕು ಎನ್ನುವುದನ್ನು ಕಡ್ಡಾಯವಾಗಿಸುವ ಮೂಲಕ ನೈಜ ಸ್ನೇಹಿತರನ್ನು ಸಂಪರ್ಕಿಸಲು ನಾವು ಗಮನ ಹರಿಸಿದೆವು. ಏಕೆಂದರೆ ನೈಜ ಬದುಕಿನಲ್ಲಿ ಸ್ನೇಹವು ಪರಸ್ಪರವಾಗಿರುತ್ತದೆ. ಅದು ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ಫಾಲೋ ಮಾಡುವುದು ಅಥವಾ ಅನುಮತಿ ಅಥವಾ ಆಹ್ವಾನವಿಲ್ಲದೆ ಯಾರೋ ಅಪರಿಚಿತರು ನಮ್ಮ ಬದುಕನ್ನು ಪ್ರವೇಶಿಸುವುದಾಗಿರುವುದಿಲ್ಲ. 

ಜವಾಬ್ದಾರಿಯುತ ವಿಕಸನ

ಆ ಆರಂಭಿಕ ದಿನಗಳಿಂದಲೂ, ನಾವು ಜವಾಬ್ದಾರಿಯುತವಾಗಿ ವಿಕಸನ ಹೊಂದಲು ಕಾರ್ಯನಿರ್ವಹಿಸಿದ್ದೇವೆ. ಸಾಮಾಜಿಕ ಮಾಧ್ಯಮದ ಸಂಭಾವ್ಯ ನಕಾರಾತ್ಮಕ ಎಫೆಕ್ಟ್‌ಗಳನ್ನು ಅರ್ಥಮಾಡಿಕೊಂಡು, ನಮ್ಮ ಎಲ್ಲ ಭವಿಷ್ಯದ ಉತ್ಪನ್ನಗಳು ಆ ಆರಂಭಿಕ ಮೌಲ್ಯಗಳನ್ನು ಬಿಂಬಿಸುವುದನ್ನು ಖಚಿತಪಡಿಸಲು ನಾವು ಪೂರ್ವಭಾವಿ ಆಯ್ಕೆಗಳನ್ನು ಮಾಡಿದೆವು. 

ಅದನ್ನು ಮಾಡಲು ನಾವು ಚಕ್ರವನ್ನು ಮರುಆವಿಷ್ಕಾರ ಮಾಡಬೇಕಾಗಲಿಲ್ಲ. ಹೊಸ ತಂತ್ರಜ್ಞಾನ ಒಡ್ಡುವ ಸವಾಲುಗಳನ್ನು ಎದುರಿಸುವಾಗ ಇತಿಹಾಸದಿಂದ ಕಲಿಯಲು ನಮ್ಮ ತಂಡವು ಸಮರ್ಥವಾಗಿತ್ತು. ಕಾಲಕ್ರಮೇಣ Snapchat ವಿಕಸನವಾದಂತೆ, ಬೃಹತ್ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಯಿರುವ ಕಂಟೆಂಟ್ ಅನ್ನು ಬಳಕೆದಾರರು ಹಂಚಿಕೊಳ್ಳಬಹುದಾದ ನಮ್ಮ ಆ್ಯಪ್‌ನ ಭಾಗಗಳನ್ನು ಅಭಿವೃದ್ಧಿಪಡಿಸುವಾಗ ಪ್ರಸಾರ ಮತ್ತು ದೂರಸಂಪರ್ಕವನ್ನು ನಿಯಂತ್ರಿಸುವ ಅಸ್ತಿತ್ವದಲ್ಲಿರುವ ನಿಯಂತ್ರಕ ಚೌಕಟ್ಟುಗಳಿಂದ ನಾವು ಪ್ರಭಾವಿತರಾದೆವು. ಉದಾಹರಣೆಗೆ, ಫೋನ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ನೀವು ಮಾತನಾಡುವಾಗ, ಗೌಪ್ಯತೆಯ ಕುರಿತು ನಿಮಗೆ ಹೆಚ್ಚಿನ ನಿರೀಕ್ಷೆಯಿರುತ್ತದೆ, ಅದೇ ಒಂದು ವೇಳೆ ನೀವು ಹಲವು ಜನರ ಮನಸ್ಸು ಮತ್ತು ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವುಳ್ಳ ಸಾರ್ವಜನಿಕ ಪ್ರಸಾರಕರಾಗಿದ್ದರೆ, ನಿಮ್ಮನ್ನು ಭಿನ್ನ ಮಾನದಂಡಗಳು ಮತ್ತು ನಿಯಂತ್ರಕ ಅಗತ್ಯಗಳಿಗೆ ಒಳಪಡಿಸಲಾಗುತ್ತದೆ. 

ಈ ದ್ವಿಭಜನೆಯು ಪ್ರಸಾರ ನಿಯಂತ್ರಕಗಳಿಂದ ಪ್ರಭಾವಿತವಾದ Snapchat ನ ಹೆಚ್ಚು ಸಾರ್ವಜನಿಕವಾದ ಭಾಗಗಳಿಗಾಗಿ ನಿಯಮಗಳನ್ನು ಅಭಿವೃದ್ಧಿಪಡಿಸಲು ನಮಗೆ ಸಹಾಯ ಮಾಡಿತು. ಈ ನಿಯಮಗಳು ನಮ್ಮ ಪ್ರೇಕ್ಷಕರನ್ನು ರಕ್ಷಿಸುತ್ತವೆ ಮತ್ತು ಇತರ ವೇದಿಕೆಗಳಿಂದ ನಮ್ಮನ್ನು ಪ್ರತ್ಯೇಕಿಸುತ್ತವೆ. ಉದಾಹರಣೆಗೆ, Snapchatter ಗಳು ತಮ್ಮ ಸುದ್ದಿ ಮತ್ತು ಮನರಂಜನೆಯನ್ನು ಪಡೆಯುವ ನಮ್ಮ ಕ್ಲೋಸ್ಡ್ ಕಂಟೆಂಟ್ ವೇದಿಕೆಯಾದ Discover, ನಮ್ಮೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ವೃತ್ತಿಪರ ಮಾಧ್ಯಮ ಪ್ರಕಟಣೆಗಾರರಿಂದ ಅಥವಾ ನಾವು ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುವ ಕಲಾವಿದರು, ಕ್ರಿಯೇಟರ್‌ಗಳು ಮತ್ತು ಕ್ರೀಡಾಪಟುಗಳಿಂದ ಅನನ್ಯ ಕಂಟೆಂಟ್ ಅನ್ನು ಪ್ರದರ್ಶಿಸುತ್ತದೆ. ಈ ಎಲ್ಲ ಕಂಟೆಂಟ್ ಒದಗಿಸುವವರು, ನಮ್ಮ ವೇದಿಕೆಯಲ್ಲಿರುವ ಎಲ್ಲ ಕಂಟೆಂಟ್‌ಗೂ ಅನ್ವಯಿಸುವ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು. ಆದರೆ Discover ಪ್ರಕಾಶಕ ಪಾಲುದಾರರು ನಮ್ಮ ಪ್ರಕಾಶಕರ ಮಾರ್ಗಸೂಚಿಗಳಿಗೂ ಬದ್ಧರಾಗಿಬೇಕಾಗಿದ್ದು, ಇದು ಕಂಟೆಂಟ್ ಅನ್ನು ಫ್ಯಾಕ್ಟ್ ಚೆಕ್ ಮಾಡುವುದನ್ನು ಅಥವಾ ನಿಖರವಾಗಿರುವುದನ್ನು ಮತ್ತು ಸೂಕ್ತವಾಗಿರುವಲ್ಲಿ ವಯೋ-ನಿರ್ಬಂಧಿತವಾಗಿಸುವುದನ್ನು ಅಗತ್ಯವಾಗಿಸುತ್ತದೆ. ಮತ್ತು Discover ನಲ್ಲಿ ಕಾಣಿಸಿಕೊಳ್ಳುವ ವೈಯಕ್ತಿಕ ಕ್ರಿಯೇಟರ್‌ಗಳಿಗೆ, ನಮ್ಮ ವೇದಿಕೆಯಲ್ಲಿ ಪ್ರಚಾರ ಮಾಡಲು ಅವಕಾಶ ಕಲ್ಪಿಸುವುದಕ್ಕೆ ಮುನ್ನ ನಮ್ಮ ಮಾನವ ಮಾಡರೇಷನ್ ತಂಡವು ಅವರ ಕಥೆಗಲನ್ನು ಪರಾಮರ್ಶಿಸುತ್ತದೆ. ವೈಯಕ್ತಿಕ ಆಸಕ್ತಿಗಳನ್ನು ಆಧರಿಸಿದ ಕಂಟೆಂಟ್ ಅನ್ನು ಪ್ರದರ್ಶಿಸಲು ನಾವು ಆಲ್ಗಾರಿದಂ ಅನ್ನು ಬಳಸುತ್ತೇವಾದರೂ, ಅವುಗಳನ್ನು ಸೀಮಿತ ಮತ್ತು ಪರಿಶೀಲಿಸಿದ ಕಂಟೆಂಟ್ ಪೂಲ್‌ಗೆ ಅನ್ವಯಿಸಲಾಗುತ್ತದೆ, ಇದು ಇತರ ವೇದಿಕೆಗಳಿಗಿಂತ ಭಿನ್ನವಾದ ವಿಧಾನವಾಗಿದೆ.

ವಿಶಾಲವಾದ Snapchat ಸಮುದಾಯದೊಂದಿಗೆ ಹಂಚಿಕೊಳ್ಳಲು ಕ್ರಿಯೇಟರ್‌ಗಳು ಸೃಜನಶೀಲ ಮತ್ತು ಮನರಂಜನೆಯ ವೀಡಿಯೊಗಳನ್ನು ಸಲ್ಲಿಸಬಹುದಾದ ಸ್ಪಾಟ್‌ಲೈಟ್‌ನಲ್ಲಿ, ಯಾವುದೇ ವಿತರಣೆಯನ್ನು ಪಡೆಯುವುದಕ್ಕೆ ಮೊದಲು ಎಲ್ಲ ಕಂಟೆಂಟ್ ಅನ್ನು ಮೊದಲು ಕೃತಕ ಬುದ್ಧಿಮತ್ತೆಯಿಂದ ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ನಂತರ 25 ಕ್ಕಿಂತ ಹೆಚ್ಚು ಜನರು ನೋಡುವುದಕ್ಕೆ ಮೊದಲು ಅದನ್ನು ಮಾನವರಿಂದ ಪರಿಶೀಲಿಸಲಾಗುತ್ತದೆ ಮತ್ತು ಮಾಡರೇಟ್ ಮಾಡಲಾಗುತ್ತದೆ. ಸುಳ್ಳುಮಾಹಿತಿ, ದ್ವೇಷ ಭಾಷಣ ಅಥವಾ ಇತರ ಸಂಭಾವ್ಯತಃ ಹಾನಿಕಾರಕ ಕಂಟೆಂಟ್‌ ಹರಡುವ ಅಪಾಯವನ್ನು ನಾವು ಕಡಿಮೆ ಮಾಡುತ್ತೇವೆ ಎನ್ನುವುದನ್ನು ಖಚಿತಪಡಿಸಲು ಇದನ್ನು ಮಾಡಲಾಗುತ್ತದೆ.

ಮೊದಲ ಬಾರಿ ನಾವು ಯಾವಾಗಲೂ ಅದನ್ನು ಸರಿಯಾಗಿ ರೂಪಿಸುವುದಿಲ್ಲ. ಆದಕಾರಣ ನಮ್ಮ ಮೌಲ್ಯಗಳಿಗೆ ಸೂಕ್ತವಾಗಿಲ್ಲದಾಗ Snapchat ನ ಭಾಗಗಳನ್ನು ನಾವು ಮರುವಿನ್ಯಾಸಗೊಳಿಸುತ್ತೇವೆ. 2017 ರಲ್ಲೂ ಹೀಗೇ ಆಯಿತು, ನಮ್ಮ ಉತ್ಪನ್ನಗಳಲ್ಲಿ ಒಂದಾದ ಕಥೆಗಳು, ಗಮನ ಸೆಳೆಯುವುದಕ್ಕಾಗಿ ತಾವು ಸೆಲೆಬ್ರಿಟಿಗಳು ಮತ್ತು ಪ್ರಭಾವ ಬೀರುವವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ ಎನ್ನುವ ಭಾವನೆಯನ್ನು Snapchatter ಗಳಿಗೆ ಮೂಡಿಸಿತು ಏಕೆಂದರೆ ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದ ಕಂಟೆಂಟ್ ಅನ್ನು ಒಂದೇ ಬಳಕೆದಾರ ಇಂಟರ್‌ಫೇಸ್‌ನಲ್ಲಿ ಒಟ್ಟುಗೂಡಿಸಲಾಗಿತ್ತು. ಆ ಅವಲೋಕನದ ಫಲಿತಾಂಶವಾಗಿ, ನಮ್ಮ ವೇದಿಕೆಯಲ್ಲಿ ಸಾಮಾಜಿಕ ತುಲನೆಯನ್ನು ಕಡಿಮೆ ಮಾಡುವ ಸಲುವಾಗಿ ಸ್ನೇಹಿತರು ರಚಿಸಿದ "ಸಾಮಾಜಿಕ" ಕಂಟೆಂಟ್ ಅನ್ನು ಸೆಲೆಬ್ರಿಟಿಗಳು ರಚಿಸಿದ "ಮೀಡಿಯಾ" ಕಂಟೆಂಟ್‌ನಿಂದ ಪ್ರತ್ಯೇಕಿಸಲು ನಿರ್ಧರಿಸಿದೆವು. ಈ ಮರುವಿನ್ಯಾಸವು ಅಲ್ಪಾವಧಿಯಲ್ಲಿ ನಮ್ಮ ಬಳಕೆದಾರ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು, ಆದರೆ ಅದು ನಮ್ಮ ಕಮ್ಯುನಿಟಿಗಾಗಿ ಮಾಡಬೇಕಾದ ಸರಿಯಾದ ಕ್ರಮವಾಗಿತ್ತು.

Snapchat ನಲ್ಲಿ ಯುವ ಜನರನ್ನು ರಕ್ಷಿಸುವುದು

ನಮ್ಮ ಧ್ಯೇಯವಾದ — ತಮ್ಮನ್ನು ಅಭಿವ್ಯಕ್ತಪಡಿಸಲು ಜನರಿಗೆ ಅನುಕೂಲ ಕಲ್ಪಿಸುವುದು, ಆ ಕ್ಷಣದಲ್ಲಿ ಜೀವಿಸುವುದು, ಜಗತ್ತಿನ ಕುರಿತು ತಿಳಿಯುವುದು ಮತ್ತು ಜೊತೆಯಾಗಿ ವಿನೋದಿಸುವುದು — Snapchat ನ ಮೂಲಭೂತ ಸಂರಚನೆಯನ್ನು ರೂಪಿಸಿದೆ. ಈ ಧ್ಯೇಯಕ್ಕೆ ಬದ್ಧರಾಗಿದ್ದರಿಂದ ಮಾನವರ ಸ್ವಭಾವವನ್ನು ಬಿಂಬಿಸುವ ಮತ್ತು ನೈಜ ಸ್ನೇಹವನ್ನು ಪೋಷಿಸುವ ವೇದಿಕೆಯನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಿದೆ. ಅದು ನಮ್ಮ ವಿನ್ಯಾಸ ಪ್ರಕ್ರಿಯೆಗಳು ಮತ್ತು ತತ್ವಗಳು, ನಮ್ಮ ನೀತಿಗಳು ಮತ್ತು ಅಭ್ಯಾಸಗಳು ಹಾಗೂ ನಮ್ಮ ಸಮುದಾಯಕ್ಕೆ ನಾವು ಒದಗಿಸುವ ಸಂಪನ್ಮೂಲಗಳು ಮತ್ತು ಟೂಲ್‌ಗಳನ್ನು ಪ್ರಭಾವಿಸುವುದನ್ನು ಮುಂದುವರಿಸಿದೆ. ಹಾಗೂ ಬೃಹತ್‌ ಆನ್‌ಲೈನ್ ಸಮುದಾಯಕ್ಕೆ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದ ಅಡಕವಾಗಿರುವ ಅಪಾಯಗಳು ಮತ್ತು ಸವಾಲುಗಳನ್ನು ಪರಿಹರಿಸಲು ನಾವು ಹೇಗೆ ಬಗೆಹರಿಸುತ್ತೇವೆ ಎನ್ನುವುದನ್ನು ಸುಧಾರಿಸುವ ನಮ್ಮ ನಿರಂತರ ಪ್ರಯತ್ನಗಳನ್ನು ಅದು ಬಲಪಡಿಸುತ್ತದೆ. 

ನಮ್ಮ ಧ್ಯೇಯಕ್ಕೆ ಬದ್ಧರಾಗಿರುವುದರ ದೊಡ್ಡ ಭಾಗವು ನಮ್ಮ ಸಮುದಾಯ ಮತ್ತು ಪಾಲುದಾರರು, ಹಾಗೂ ಪೋಷಕರು, ಕಾನೂನು ರೂಪಿಸುವವರು ಮತ್ತು ಸುರಕ್ಷತಾ ತಜ್ಞರೊಂದಿಗೆ ವಿಶ್ವಾಸ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದಾಗಿದೆ. ನಮ್ಮ ಉತ್ಪನ್ನ ವಿನ್ಯಾಸ ಪ್ರಕ್ರಿಯೆಯ ಕೇಂದ್ರಭಾಗದಲ್ಲಿ ಗೌಪ್ಯತೆ ಮತ್ತು ಸುರಕ್ಷತೆಯನ್ನು ಇರಿಸಲು ನಾವು ಮಾಡಿದ ಉದ್ದೇಶಪೂರ್ವಕ, ಸ್ಥಿರ ನಿರ್ಧಾರಗಳ ಮೂಲಕ ಆ ಸಂಬಂಧಗಳನ್ನು ರೂಪಿಸಲಾಗಿದೆ. 

ಉದಾಹರಣೆಗೆ, ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಅಭಿವೃದ್ಧಿ ಪ್ರಕ್ರಿಯೆಯ ಆರಂಭದಿಂದಲೇ ಪರಿಗಣಿಸುವ ಜವಾಬ್ದಾರಿಯುತ ವಿನ್ಯಾಸ ಪ್ರಕ್ರಿಯೆಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಮತ್ತು ಕಠಿಣ ಪ್ರಕ್ರಿಯಗಳ ಮೂಲಕ ನಾವು ಆ ತತ್ವಗಳನ್ನು ವಾಸ್ತವಕ್ಕೆ ತಂದಿದ್ದೇವೆ. Snapchat ನಲ್ಲಿನ ಪ್ರತಿ ಹೊಸ ವೈಶಿಷ್ಟ್ಯವು, ಅದು ಜಾರಿಗೆ ಬರುವುದಕ್ಕೆ ಸಾಕಷ್ಟು ಮುಂಚೆಯೇ — ವಿನ್ಯಾಸಕಾರರು, ಡೇಟಾ ವಿಜ್ಞಾನಿಗಳು, ಎಂಜಿನಿಯರ್‌ಗಳು, ಉತ್ಪನ್ನ ಮ್ಯಾನೇಜರ್‌ಗಳು, ಉತ್ಪನ್ನ ಸಮಾಲೋಚಕರು, ಪಾಲಿಸಿ ಮುಖ್ಯಸ್ಥರು ಮತ್ತು ಗೌಪ್ಯತಾ ಎಂಜಿನಿಯರ್‌ಗಳು ಸೇರಿದಂತೆ — Snap ಅನ್ನು ಪರಿಶೀಲಿಸುವ ತಂಡಗಳು ನಡೆಸುವ ವ್ಯಾಖ್ಯಾನಿಸಿದ ಗೌಪ್ಯತೆ ಮತ್ತು ಸುರಕ್ಷತೆ ಪರಿಶೀಲನೆಯ ಮೂಲಕ ಹಾದುಹೋಗುತ್ತವೆ.

ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ 80% ಗೂ ಹೆಚ್ಚಿನ ನಮ್ಮ ಸಮುದಾಯವು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು, ಹದಿಹರೆಯದವರನ್ನು ರಕ್ಷಿಸಲು ನಾವು ಭಾರೀ ಪ್ರಮಾಣದ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸಿದ್ದೇವೆ. ಹದಿಹರೆಯದವರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವುದಕ್ಕಾಗಿ ಹೆಚ್ಚುವರಿ ಗೌಪ್ಯತೆ ಮತ್ತು ಸುರಕ್ಷತೆ ನೀತಿಗಳು ಹಾಗೂ ವಿನ್ಯಾಸ ತತ್ವಗಳನ್ನು ಅನ್ವಯಿಸಲು ನಾವು ಚಿಂತನಶೀಲ ಮತ್ತು ಉದ್ದೇಶಪೂರ್ವಕ ಆಯ್ಕೆಗಳನ್ನು ಮಾಡಿದ್ದೇವೆ. ಇದು ಇವುಗಳನ್ನು ಒಳಗೊಂಡಿದೆ:

  • ನಾವು ಉತ್ಪನ್ನಗಳನ್ನು ವಿನ್ಯಾಸಗೊಳಿಸುವಾಗ ಅಪ್ರಾಪ್ತರ ವಿಶಿಷ್ಟ ಸೂಕ್ಷ್ಮತೆಗಳು ಮತ್ತು ಪರಿಗಣನೆಗಲನ್ನು ಪರಿಗಣಿಸುವುದು. ಆದಕಾರಣ ನಾವು ಉದ್ದೇಶಪೂರ್ವಕವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಸಾರ್ವಜನಿಕ ಪ್ರೊಫೈಲ್‌ಗಳನ್ನು ನಿಷೇಧಿಸುವ ಮೂಲಕ ಅಪ್ರಾಪ್ತರನ್ನು ಹುಡುಕುವುದನ್ನು ಕಷ್ಟವಾಗಿಸಿದ್ದೇವೆ ಹಾಗೂ ತ್ವರಿತ ಸೇರ್ಪಡೆಯಲ್ಲಿ (ಸ್ನೇಹಿತರ ಸಲಹೆಗಳು) ಅಪ್ರಾಪ್ತರ ಕಂಡುಹಿಡಿಯುವಿಕೆಯನ್ನು ಮಿತಿಗೊಳಿಸುವ ವೈಶಿಷ್ಟ್ಯವನ್ನು ಬಿಡುಗಡೆ ಮಾಡುತ್ತಿದ್ದೇವೆ. ಮತ್ತು ವಯೋ-ನಿರ್ಬಂಧಿತ ಕಂಟೆಂಟ್ ಮತ್ತು ಜಾಹೀರಾತುಗಳನ್ನು ನೋಡದಂತೆ ಅಪ್ರಾಪ್ತರನ್ನು ತಡೆಯಲು ನಾವು ಬಹಳ ಹಿಂದೆಯೇ ವಯೋ-ನಿರ್ಬಂಧದ ಟೂಲ್‌ಗಳನ್ನು ಅಳವಡಿಸಿದ್ದೇವೆ. 

  • ಡಿಫಾಲ್ಟ್ ಆಗಿ ಸ್ಥಳ ಹಂಚಿಕೊಳ್ಳುವಿಕೆಯನ್ನು ಆಫ್ ಮಾಡುವುದು ಮತ್ತು ಕಳವಳಕಾರಿಯಾದ ಕಂಟೆಂಟ್ ಅಥವಾ ನಡವಳಿಕೆಯನ್ನು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳಿಗೆ ವರದಿ ಮಾಡಲು ಬಳಕೆದಾರರಿಗೆ ಆ್ಯಪ್‌ನಲ್ಲಿ ಸುವ್ಯವಸ್ಥಿತ ವರದಿಗಾರಿಕೆಯನ್ನು ಒದಗಿಸುವಂತಹ ಸ್ಥಿತ ಮತ್ತು ಬಳಸಲು ಸುಲಭವಾದ ನಿಯಂತ್ರಣಗಳನ್ನು ಒದಗಿಸುವ ಮೂಲಕ Snapchatter ಗಳನ್ನು ಸಬಲೀಕರಣಗೊಳಿಸುವುದು. ಒಮ್ಮೆ ವರದಿ ಮಾಡಿದ ಬಳಿಕ, ಸಂಭಾವ್ಯ ಹಾನಿಯನ್ನು ಕನಿಷ್ಟಗೊಳಿಸಲು ಬಹುತೇಕ ಕಂಟೆಂಟ್ ವಿರುದ್ಧ 2 ಗಂಟೆಗಳ ಒಳಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 

  • ತಮ್ಮ ಹದಿಹರೆಯದ ಮಕ್ಕಳ ಸ್ನೇಹಿತರನ್ನು ನೋಡುವ, ಅವರ ಗೌಪ್ಯತೆ ಮತ್ತು ಸ್ಥಳ ಸೆಟ್ಟಿಂಗ್‌ಗಳನ್ನು ನಿರ್ವಹಿಸುವ ಮತ್ತು ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ನೋಡುವ ಸಾಮರ್ಥ್ಯವನ್ನು ಪೋಷಕರಿಗೆ ಒದಗಿಸುವ ಪ್ಲ್ಯಾನ್‌ಗಳು ಸೇರಿದಂತೆ —ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಪೋಷಕರಿಗೆ ಹೆಚ್ಚಿನ ಮೇಲ್ವಿಚಾರಣೆಯನ್ನು ಒದಗಿಸುವ ಟೂಲ್‌ಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುವುದು.

  • ಫ್ರೆಂಡ್ ಚೆಕಪ್ ಮತ್ತು Here for You ನಂತಹ —ನಮ್ಮ ಸಮುದಾಯದ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ಹೂಡಿಕೆ ಮಾಡುವುದು. ತಾವು ಯಾರೊಂದಿಗೆ ಸ್ನೇಹಿತರಾಗಿದ್ದೇವೆ ಎನ್ನುವುದನ್ನು ಪರಿಶೀಲಿಸಲು ಮತ್ತು ಪಟ್ಟಿಯು ಪರಿಚಿತರಾಗಿರುವ ಮತ್ತು ಈಗಲೂ ಸಂಪರ್ಕಿತರಾಗಿರಲು ಬಯಸುವ ಜನರನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಫ್ರೆಂಡ್ ಚೆಕಪ್ Snapchatter ಗಳಿಗೆ ಸುಳಿವು ನೀಡುತ್ತದೆ. ತಜ್ಞರಿಂದ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ Here for You, ಮಾನಸಿಕ ಆರೋಗ್ಯ ಅಥವಾ ಭಾವನಾತ್ಮಕ ಬಿಕ್ಕಟ್ಟು ಎದುರಿಸುತ್ತಿರುವ ಬಳಕೆದಾರರಿಗೆ ಬೆಂಬಲವನ್ನು ಒದಗಿಸುತ್ತದೆ.

  • ಅಪ್ರಾಪ್ತರ ಬಳಕೆಯನ್ನು ತಡೆಯುವುದು. ಮಕ್ಕಳಿಗೆ ಮಾರಾಟ ಮಾಡಲು ನಾವು ಯಾವುದೇ ಪ್ರಯತ್ನಗಳನ್ನು ಮಾಡುವುದಿಲ್ಲ — ಮತ್ತು ಯಾವುದೇ ಯೋಜನೆಗಳನ್ನು ಹೊಂದಿಲ್ಲ — ಹಾಗೂ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Snapchat ಅಕೌಂಟ್‌ಗಳನ್ನು ತೆರೆಯಲು ಅನುಮತಿಸುವುದಿಲ್ಲ. ಒಂದು ಖಾತೆ ನೋಂದಣಿ ಮಾಡುವಾಗ, ವ್ಯಕ್ತಿಗಳು ತಮ್ಮ ಜನ್ಮದಿನಾಂಕ ಒದಗಿಸಬೇಕಾಗುತ್ತದೆ ಮತ್ತು ಒಬ್ಬ ಬಳಕೆದಾರ 13 ಕ್ಕಿಂತ ಕಡಿಮೆ ವಯಸ್ಸನ್ನು ನಮೂದಿಸಿದರೆ ನೋಂದಣಿ ಪ್ರಕ್ರಿಯೆ ವಿಫಲವಾಗುತ್ತದೆ. ಪ್ರಸ್ತುತ ಇರುವ ಖಾತೆಗಳಿಂದ 13 ರಿಂದ 17 ವರ್ಷದೊಳಗಿನ Snapchat ಬಳಕೆದಾರರು ತಮ್ಮ ಜನ್ಮದಿನವನ್ನು 18 ಮತ್ತು ಹೆಚ್ಚಿನದಕ್ಕೆ ಅಪ್‌ಡೇಟ್ ಮಾಡದಂತೆ ತಡೆಯುವ ಹೊಸ ಸುರಕ್ಷತಾ ಕ್ರಮವನ್ನು ಕೂಡ ನಾವು ಅನುಷ್ಠಾನಗೊಳಿಸಿದ್ದೇವೆ. ನಿರ್ದಿಷ್ಟವಾಗಿ, ಒಬ್ಬ ಅಪ್ರಾಪ್ತ ವಯಸ್ಕ ತನ್ನ ಹುಟ್ಟಿದ ವರ್ಷವನ್ನು 18 ಕ್ಕಿಂತ ಹೆಚ್ಚಿನದಕ್ಕೆ ಬದಲಾಯಿಸಲು ಪ್ರಯತ್ನಿಸಿದರೆ, Snapchat ಒಳಗೆ ವಯೋ-ಸೂಕ್ತವಲ್ಲದ ಕಂಟೆಂಟ್ ಅನ್ನು ಬಳಕೆದಾರರು ಪ್ರವೇಶಿಸುತ್ತಿಲ್ಲ ಎನ್ನುವುದನ್ನು ಖಚಿತಪಡಿಸಲು ಆ ಬದಲಾವಣೆಯನ್ನು ನಾವು ತಡೆಯುತ್ತೇವೆ.

ಸಮಾಪ್ತಿ ಮತ್ತು ನಿರೀಕ್ಷೆ

ನಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸಲು ಹೊಸ ವಿಧಾನಗಳಿಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತಿರುತ್ತೇವೆ ಮತ್ತು ನಾವು ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ. ಆನ್‌ಲೈನ್ ಸುರಕ್ಷತೆಯು ಹಲವು ವಲಯಗಳು ಮತ್ತು ಕಾರ್ಯಕರ್ತರನ್ನು ಒಳಗೊಂಡ, ಹಂಚಿಕೊಂಡ ಜವಾಬ್ದಾರಿಯಾಗಿದೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಸುರಕ್ಷತಾ ಸಲಹಾ ಮಂಡಳಿ, ತಂತ್ರಜ್ಞಾನ ಉದ್ಯಮ ಸಹವರ್ತಿಗಳು, ಸರ್ಕಾರ ಮತ್ತು ನಾಗರಿಕ ಸಮಾಜ ಸೇರಿದಂತೆ ಸರುಕ್ಷತಾ ಪಾಲುದಾರರೊಂದಿಗೆ ನಮ್ಮ ಪಾಲನ್ನು ಮಾಡಲು ನಾವು ಬದ್ಧರಾಗಿದ್ದೇವೆ. ತಂತ್ರಜ್ಞಾನ ಕೇಂದ್ರಿತ ಮತ್ತು ಜಾಗೃತಿ ಹೆಚ್ಚಿಸುವ ಉಪಕ್ರಮಗಳಿಂದ ಸಂಶೋಧನೆ ಮತ್ತು ಅತ್ಯುತ್ತಮ ಅಭ್ಯಾಸ ಹಂಚಿಕೊಳ್ಳುವಿಕೆಯವರೆಗೆ, ಆನ್‌ಲೈನ್‌ನಲ್ಲಿ ಅಪ್ರಾಪ್ತರನ್ನು ರಕ್ಷಿಸಲು ಸಮರ್ಪಿತವಾಗಿರುವ ಸಂಘಟನೆಗಳೊಂದಿಗೆ ನಾವು ಸಕ್ರಿಯವಾಗಿ ತೊಡಗಿಕೊಂಡಿದ್ದೇವೆ. ಅಪ್ರಾಪ್ತರ ವಯಸ್ಸಿನ ಪರಿಶೀಲನೆ ಸೇರಿದಂತೆ ನಮ್ಮ ಉದ್ಯಮದಾದ್ಯಂತ ಹಲವು ಸಂಕೀರ್ಣ ಸಮಸ್ಯೆಗಳು ಮತ್ತು ತಾಂತ್ರಿಕ ಸವಾಲುಗಳನ್ನು ನಾವು ಹೊಂದಿದ್ದೇವೆ ಎನ್ನುವುದು ಕೂಡ ನಮಗೆ ತಿಳಿದಿದೆ, ಹಾಗೂ ಸದೃಢವಾದ ಉದ್ಯಮದಾದ್ಯಂತದ ಪರಿಹಾರಗಳನ್ನು ಗುರುತಿಸಲು ಪಾಲುದಾರರು ಮತ್ತು ನೀತಿರೂಪಿಸುವವರೊಂದಿಗೆ ಕಾರ್ಯನಿರ್ವಹಿಸಲು ನಾವು ಬದ್ಧರಾಗಿದ್ದೇವೆ.         

Snapchatter ಗಳ ಯೋಗಕ್ಷೇಮವನ್ನು ರಕ್ಷಿಸುವ ವಿಷಯದಲ್ಲಿ ನಾವು ವಿನಮ್ರತೆ ಮತ್ತು ದೃಢವಾದ ನಿರ್ಧಾರದೊಂದಿಗೆ ಮುನ್ನಡೆಯುತ್ತಿದ್ದೇವೆ. ಪ್ರತಿ ತಿಂಗಳು ಜಗತ್ತಿನಾದ್ಯಂತ 500 ಮಿಲಿಯನ್‌ಗೂ ಅಧಿಕ ಜನರು Snapchat ಬಳಸುತ್ತಿದ್ದಾರೆ ಮತ್ತು ನಮ್ಮ 95% ಬಳಕೆದಾರರು Snapchat ಅವರಿಗೆ ಖುಷಿ ನೀಡುತ್ತದೆ ಎನ್ನುತ್ತಾರೆ, ಹಾಗಾಗಿ ನಾವು ಮಾಡುವ ಎಲ್ಲದರಲ್ಲೂ ಅವರ ಅತ್ಯುತ್ತಮ ಹಿತಾಸಕ್ತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ನೈತಿಕ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ನಾವು ಕೆಲಸ ಮಾಡುವ, ಶಾಪಿಂಗ್ ಮಾಡುವ, ಕಲಿಯುವ ಮತ್ತು ಸಂವಹನ ನಡೆಸುವ ವಿಧಾನಗಳಿಗೆ ಸಕಾರಾತ್ಮಕ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ — ವರ್ಧಿತ ವಾಸ್ತವವನ್ನು ನಾವು ಆವಿಷ್ಕಾರ ಮಾಡುತ್ತಿರುವಂತೆ ಅದು ವಿಶೇಷತಃ ನಿಜವಾಗಿದೆ. ವರ್ಧಿತ ವಾಸ್ತವದ ಮುಂದಿನ ಪೀಳಿಗೆಯಂತಹ ಹೊಸ ತಂತ್ರಜ್ಞಾನಗಳನ್ನು ನಾವು ಪ್ರಯೋಗ ಮಾಡುವುದನ್ನು ಮುಂದುವರಿಸಿದಂತೆ ನಾವು ಅದೇ ಮೂಲ ಮೌಲ್ಯಗಳು ಮತ್ತು ತತ್ವಗಳನ್ನು ಅನ್ವಯಿಸುತ್ತೇವೆ. 

ನಾವು ಭವಿಷ್ಯದತ್ತ ನೋಡಿದಂತೆ, ಕಂಪ್ಯೂಟಿಂಗ್ ಮತ್ತು ತಂತ್ರಜ್ಞಾನವು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಏಕೀಕರಿಸಲ್ಪಡುತ್ತದೆ. ನಿಯಂತ್ರಣ ಅಗತ್ಯವಾದುದು ಎಂದು ನಾವು ಭಾವಿಸುತ್ತೇವೆ ಆದರೆ ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿರುವ ವೇಗವನ್ನು ಮತ್ತು ನಿಯಂತ್ರಣವನ್ನು ಅನುಷ್ಠಾನಗೊಳಿಸಬಹುದಾದ ದರವನ್ನು ಗಮನಿಸಿದರೆ, ನಿಯಂತ್ರಣವೊಂದರಿಂದಲೇ ಕೆಲಸವನ್ನು ಸಾಧಿಸಲು ಆಗದು. ತಂತ್ರಜ್ಞಾನ ಕಂಪನಿಗಳು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಮತ್ತು ಅವರು ಸೇವೆ ಒದಗಿಸುವ ಸಮುದಾಯಗಳನ್ನು ಸಕ್ರಿಯವಾಗಿ ರಕ್ಷಿಸಬೇಕು. 

ಅವರು ಹಾಗೆ ಮಾಡದಿದ್ದಲ್ಲಿ, ಅವರನ್ನು ಉತ್ತರದಾಯಿಗಳನ್ನಾಗಿಸಲು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಗಳನ್ನು ತನಿಖೆ ಮಾಡಲು ಉಪಸಮಿತಿಯ ಪ್ರಯತ್ನಗಳನ್ನು ನಾವು ಸಂಪೂರ್ಣ ಬೆಂಬಲಿಸುತ್ತೇವೆ ಹಾಗೂ ನಮ್ಮ ಸಮಾಜವನ್ನು ಸುರಕ್ಷಿತವಾಗಿ ಇರಿಸುವ ಸಮಸ್ಯೆ ಪರಿಹರಿಸುವ ಸಹಭಾಗಿತ್ವದ ವಿಧಾನವನ್ನು ಸ್ವಾಗತಿಸುತ್ತೇವೆ. 

ಇಂದು ನಿಮ್ಮ ಮುಂದೆ ಹಾಜರಾಗಲು ಹಾಗೂ ಈ ನಿರ್ಣಾಯಕ ಸಂಗತಿಗಳನ್ನು ಚರ್ಚಿಸಲು ಅವಕಾಶ ನೀಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ಎದುರು ನೋಡುತ್ತೇನೆ.

ಸುದ್ದಿಗೆ ಹಿಂತಿರುಗಿ