ಇವನ್ ಸ್ಪೀಗಲ್ ಅವರು ಸಂಸದೀಯ ಸಮಿತಿಗೆ ನೀಡಿದ ಲಿಖಿತ ಸಾಕ್ಷ್ಯ
ಜನವರಿ 31, 2024
ಇವನ್ ಸ್ಪೀಗಲ್ ಅವರು ಸಂಸದೀಯ ಸಮಿತಿಗೆ ನೀಡಿದ ಲಿಖಿತ ಸಾಕ್ಷ್ಯ
ಜನವರಿ 31, 2024
ಇಂದು, ನಮ್ಮ ಸಹ-ಸಂಸ್ಥಾಪಕ ಮತ್ತು ಸಿಇಒ ಇವನ್ ಸ್ಪೀಗಲ್ ಅವರು ಯುನೈಟೆಡ್ ಸ್ಟೇಟ್ಸ್ ಸಂಸದೀಯ ನ್ಯಾಯಾಂಗ ಸಮಿತಿಯ ಮುಂದೆ ಸಾಕ್ಷಿ ಹೇಳಲು ಇತರ ತಂತ್ರಜ್ಞಾನ ವೇದಿಕೆಗಳ ಜೊತೆಗೆ ಹಾಜರಾಗಲಿದ್ದಾರೆ. ಸಮಿತಿಗೆ ಮುಂಚಿತವಾಗಿ ಸಲ್ಲಿಸಿರುವ ಇವನ್ ಅವರ ಪೂರ್ಣ ಲಿಖಿತ ಸಾಕ್ಷ್ಯದ ಹೇಳಿಕೆಯನ್ನು ನೀವು ಕೆಳಗೆ ಓದಬಹುದು.
***
ಅಧ್ಯಕ್ಷ ಡರ್ಬಿನ್ ಅವರೇ, ವಿಪಕ್ಷದ ನಾಯಕ ಗ್ರಹಾಮ್ ಅವರೇ ಮತ್ತು ಸಮಿತಿಯ ಸದಸ್ಯರೇ, Snapchat ನಲ್ಲಿ ಹದಿಹರೆಯದವರನ್ನು ರಕ್ಷಿಸುವ ನಮ್ಮ ಪ್ರಯತ್ನಗಳ ಕುರಿತು ನಿಮಗೆ ಮಾಹಿತಿ ನೀಡಲು ನಿಮ್ಮ ಮುಂದೆ ಹಾಜರಾಗುವಂತೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಇವನ್ ಸ್ಪೀಗಲ್, Snap ನ ಸಹ-ಸಂಸ್ಥಾಪಕ ಮತ್ತು ಸಿಇಒ. ನಮ್ಮ ಸೇವೆಯಾದ Snapchat, 20 ಮಿಲಿಯನ್‌ಗೂ ಅಧಿಕ ಹದಿಹರೆಯದವರು ಸೇರಿದಂತೆ 100 ಮಿಲಿಯನ್‌ಗೂ ಅಧಿಕ ಅಮೆರಿಕನ್ನರಿಂದ ಅವರ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಸಂವಹನ ನಡೆಸಲು ಬಳಸಲ್ಪಡುತ್ತಿದೆ. ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸುವ ಮಹತ್ತರ ಹೊಣೆಗಾರಿಕೆಯನ್ನು ನಾವು ಹೊಂದಿದ್ದೇವೆ.
Snapchat ನ ಅಗಾಧತೆ ಮತ್ತು ವ್ಯಾಪಕ ಬಳಕೆಯಿಂದಾಗಿ ಅಪರಾಧಿಗಳು ನಮ್ಮ ಸೇವೆಯನ್ನು ದುರ್ಬಳಕೆ ಮಾಡಲು ಮತ್ತು ನಮ್ಮ ಸಮುದಾಯವನ್ನು ವಂಚಿಸಲು ಪ್ರಯತ್ನಿಸುತ್ತಾರೆ ಎನ್ನುವುದು ನಮಗೆ ತಿಳಿದಿದೆ. ಆದಕಾರಣ ನಾವು ನಮ್ಮ ಸುರಕ್ಷತಾ ಟೂಲ್‌ಗಳನ್ನು ನಿರಂತರವಾಗಿ ಸುಧಾರಣೆ ಮಾಡುತ್ತಿದ್ದೇವೆ ಮತ್ತು ಎಂದೆಂದಿಗೂ ಬೆಳೆಯುತ್ತಲೇ ಇರುವ ಬೆದರಿಕೆಯ ವ್ಯಾಪ್ತಿಯಿಂದ ನಮ್ಮ ಸಮುದಾಯವನ್ನು ರಕ್ಷಿಸಲು ಹೂಡಿಕೆ ಮಾಡುತ್ತಿದ್ದೇವೆ. Snapchatter ಗಳನ್ನು ರಕ್ಷಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ ಮತ್ತು ವ್ಯವಹಾರದ ಅವಶ್ಯಕತೆಯಾಗಿದೆ. ಕೆಲವು ಅತಿದೊಡ್ಡ ಬೆದರಿಕೆಗಳ ವಿರುದ್ಧ ನಾವು ನಡೆಸಲು ಪ್ರಯತ್ನಿಸುತ್ತಿರುವ ಹೋರಾಟದ ಕುರಿತು ನಾನು ಇನ್ನಷ್ಟು ತಿಳಿಸಲು ಬಯಸುತ್ತೇನೆ, ಆದರೆ ಸಮಿತಿಯ ಮುಂದೆ ನಾನು ಇದೇ ಮೊದಲನೇ ಬಾರಿ ಹಾಜರಾಗುತ್ತಿರುವುದರಿಂದ ನಮ್ಮ ಸೇವೆಯ ಬಗ್ಗೆ ಮೊದಲು ಒಂದಿಷ್ಟು ಹಿನ್ನೆಲೆ ಒದಗಿಸಲು ಬಯಸುತ್ತೇನೆ.
2011 ರಲ್ಲಿ ನನ್ನ ಸಹ-ಸಂಸ್ಥಾಪಕ ಬಾಬ್ಬಿ ಮರ್ಫಿ ಮತ್ತು ನಾನು Snapchat ಅನ್ನು ನಿರ್ಮಿಸಿದಾಗ, ನಾವು ಒಂದಿಷ್ಟು ಭಿನ್ನವಾದುದನ್ನು ಬಯಸಿದ್ದೆವು. ನಾವು ಸಾಮಾಜಿಕ ಮಾಧ್ಯಮದ ಜೊತೆಗೆ ಬೆಳೆದವು ಮತ್ತು ಅದು ನಮಗೆ ಸಂಕಟದ ಭಾವನೆಯನ್ನು ಉಂಟುಮಾಡಿತ್ತು – ಏಕೆಂದರೆ ಅದು ನಿರಂತರ ತೀರ್ಪುಗಳಿಂದ ತುಂಬಿದ್ದ ಸಾರ್ವಜನಿಕವಾದ, ಶಾಶ್ವತ ಜನಪ್ರಿಯತೆಯ ಸ್ಪರ್ಧೆಯಾಗಿತ್ತು. ನೈಜ ಸ್ನೇಹವನ್ನು ಬಲಪಡಿಸುತ್ತದೆ ಎಂದು ನಾವು ನಂಬಿರುವ ಪ್ರತಿದಿನದ ಕ್ಷಣಗಳ ಬದಲಾಗಿ, ಸಾಮಾಜಿಕ ಮಾಧ್ಯಮವು ಪರಿಪೂರ್ಣ ಚಿತ್ರಗಳಿಗಾಗಿ ಮೀಸಲಾಗಿತ್ತು.
ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಸಂವಹನ ನಡೆಸಲು, ಕ್ಷಣವನ್ನು ಹಂಚಿಕೊಳ್ಳಲು, ಆ ಕ್ಷಣದಲ್ಲಿ ಜೀವಿಸಲು ಮತ್ತು ಭೌತಿಕವಾಗಿ ದೂರದಲ್ಲಿದ್ದರೂ ಜೊತೆಯಾಗಿರುವ ಭಾವನೆಯನ್ನು ಹೊಂದುವುದಕ್ಕೆ ಜನರಿಗೆ ಸಹಾಯ ಮಾಡಲು ಹೊಸ ವಿಧಾನವನ್ನು ಒದಗಿಸುವುದಕ್ಕಾಗಿ ನಾವು Snapchat ಅನ್ನು ನಿರ್ಮಿಸಿದೆವು. ಸರಾಸರಿಯಾಗಿ, Snapchat ನಲ್ಲಿ ಜನರು ಹೆಚ್ಚಿನ ಸಮಯವನ್ನು ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಾ ಕಳೆಯುತ್ತಾರೆ.
ನಿಷ್ಕ್ರಿಯ ವೀಕ್ಷಣೆಯ ಬದಲಾಗಿ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು, ಕಂಟೆಂಟ್ ಫೀಡ್ ಬದಲು ಕ್ಯಾಮರಾಗೆ ತೆರೆದುಕೊಳ್ಳುವ ರೀತಿಯಲ್ಲಿ ನಾವು Snapchat ಅನ್ನು ವಿನ್ಯಾಸಗೊಳಿಸಿದೆವು. Snapchat ನಲ್ಲಿ ಜನರು ಸ್ನೇಹಿತರೊಂದಿಗೆ ತಮ್ಮ ಕಥೆಯನ್ನು ಹಂಚಿಕೊಂಡಾಗ ಸಾರ್ವಜನಿಕ ಲೈಕ್‌ಗಳು ಅಥವಾ ಕಾಮೆಂಟ್‌ಗಳು ಇರುವುದಿಲ್ಲ.
ಕ್ಷಣಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸಂದೇಶಗಳನ್ನು ಡೀಫಾಲ್ಟ್ ಆಗಿ ಅಳಿಸುವ ಮೂಲಕ, ರೆಕಾರ್ಡ್ ಮಾಡದ ಅಥವಾ ಶಾಶ್ವತವಾಗಿ ಉಳಿಸದ ಫೋನ್ ಕರೆ ಅಥವಾ ಮುಖಾಮುಖಿ ಸಂಭಾಷಣೆಯ ಹಗುರವನ್ನು Snapchat ಗೆ ನಾವು ಒದಗಿಸಿದೆವು. ಇದು ಲಕ್ಷಾಂತರ ಅಮೆರಿಕನ್ನರಿಗೆ ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ನಿಜಕ್ಕೂ ಹೇಗನಿಸುತ್ತದೆ ಎನ್ನುವುದನ್ನು ಹೇಳಿಕೊಳ್ಳಲು ಹೆಚ್ಚು ಆರಾಮದಾಯಕವಾಗುವಂತೆ ಮಾಡಿದೆ. ಜನರು Snapchat ಗೆ ಸೈನಪ್ ಮಾಡುವಾಗ, ಸಂಭಾಷಣೆಗಳನ್ನು ಡೀಫಾಲ್ಟ್ ಆಗಿ ಅಳಿಸಿದ್ದರೂ ಸಹ, ಸ್ವೀಕರಿಸಿದವರು ಸಂದೇಶಗಳನ್ನು ಸುಲಭವಾಗಿ ಉಳಿಸಬಹುದು ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಎನ್ನುವುದನ್ನು ನಾವು ಸ್ಪಷ್ಟಪಡಿಸುತ್ತೇವೆ.
ನಾವು ಹೊಸ ವೈಶಿಷ್ಟ್ಯಗಳನ್ನು ರೂಪಿಸುವಾಗ, ನಮ್ಮ ಸಮುದಾಯಕ್ಕೆ ಇನ್ನಷ್ಟು ಉತ್ತಮವಾಗಿ ಸೇವೆ ಒದಗಿಸಲು ಮತ್ತು Snapchat ಅನ್ನು ಸುರಕ್ಷಿತವಾಗಿಡಲು ನಮ್ಮ ವ್ಯಾಪಾರವನ್ನು ರಾಜಿ ಮಾಡಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ನಮ್ಮ ಕಂಟೆಂಟ್ ಸೇವೆಯನ್ನು ನಿರ್ಮಿಸಿದಾಗ, ಹಾನಿಕಾರಕ ಕಂಟೆಂಟ್‌ನ ಪ್ರಸರಣವನ್ನು ತಡೆಯಲು ನೆರವಾಗುವುದಕ್ಕೆ ಕಂಟೆಂಟ್ ಅನ್ನು ವಿಶಾಲವಾಗಿ ವಿತರಣೆ ಮಾಡುವುದಕ್ಕೆ ಮುನ್ನ ಅದನ್ನು ಪೂರ್ವಭಾವಿಯಾಗಿ ಮಾಡರೇಟ್ ಮಾಡಲು ನಿರ್ಧರಿಸಿದೆವು. ಮನರಂಜಿಸುವ ಮತ್ತು ನಮ್ಮ ಕಂಟೆಂಟ್ ಮಾರ್ಗಸೂಚಿಗಳ ಪಾಲನೆ ಮಾಡುವ ಕಂಟೆಂಟ್ ರಚಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ನಾವು ಮಾಧ್ಯಮ ಪ್ರಕಾಶಕರು ಮತ್ತು ಕ್ರಿಯೇಟರ್‌ಗಳಿಗೆ ನಮ್ಮ ಆದಾಯದಲ್ಲಿ ಒಂದು ಪಾಲನ್ನೂ ನೀಡುತ್ತೇವೆ.
ಸ್ನೇಹಿತರ ನಡುವಿನ ಸಂಭಾಷಣೆಗೆ ಆಯ್ಕೆ ಮಾಡಿಕೊಳ್ಳುವುದನ್ನು ಅಗತ್ಯವಾಗಿಸುವ ರೀತಿ ನಮ್ಮ ಸೇವೆಯನ್ನು ನಾವು ವಿನ್ಯಾಸಗೊಳಿಸಿದ್ದೇವೆ, ಅಂದರೆ ತಾವು ಯಾರೊಂದಿಗೆ ಸಂವಹನ ನಡೆಸುತ್ತೇವೆ ಎನ್ನುವುದನ್ನು ಜನರು ಪೂರ್ವಭಾವಿಯಾಗಿ ಆರಿಸಿಕೊಳ್ಳಬೇಕು, ಹಾಗಾಗಿ ಇದು ಯಾವುದೇ ಅಪರಿಚಿತ ತಮ್ಮ ಬಳಿ ಫೋನ್ ಸಂಖ್ಯೆ ಇರುವ ಯಾರಿಗಾದರೂ ಸಂದೇಶ ಕಳುಹಿಸಬಹುದಾದ ಪಠ್ಯ ಸಂದೇಶ ಕಳುಹಿಸುವಿಕೆಗಿಂತ ಭಿನ್ನವಾಗಿದೆ. Snapchat ನಲ್ಲಿ ಸ್ನೇಹಿತರ ಪಟ್ಟಿ ಖಾಸಗಿಯಾಗಿರುತ್ತದೆ, ಇದು ಸಾಮಾಜಿಕ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಅದರ ಜೊತೆಗೆ Snapchat ನಲ್ಲಿ ಒಬ್ಬ ವ್ಯಕ್ತಿಯ ಸ್ನೇಹಿತರನ್ನು ಪತ್ತೆಮಾಡುವ ಸಂಚುಕೋರರ ಸಾಮರ್ಥ್ಯವನ್ನೂ ಮಿತಿಗೊಳಿಸುತ್ತದೆ.
Snapchat ಎಲ್ಲರಿಗೂ ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ ಮತ್ತು ಅನಪೇಕ್ಷಿತ ಸಂಪರ್ಕಗಳನ್ನು ತಡೆಯಲು ಹಾಗೂ ವಯೋ-ಸೂಕ್ತವಾದ ಅನುಭವವನ್ನು ಒದಗಿಸಲು ಸಹಾಯ ಮಾಡುವುದಕ್ಕಾಗಿ ಅಪ್ರಾಪ್ತವಯಸ್ಕರಿಗೆ ಹೆಚ್ಚುವರಿ ರಕ್ಷಣೆಗಳನ್ನು ಒದಗಿಸುತ್ತೇವೆ. Snapchat ನ ಡೀಫಾಲ್ಟ್ "ನನ್ನನ್ನು ಸಂಪರ್ಕಿಸಿ" ಸೆಟ್ಟಿಂಗ್‌ಗಳನ್ನು ಎಲ್ಲ ಖಾತೆಗಳಿಗೆ ಕೇವಲ ಸ್ನೇಹಿತರು ಮತ್ತು ಫೋನ್ ಸಂಪರ್ಕಗಳಿಗೆ ಹೊಂದಿಸಲಾಗಿರುತ್ತದೆ ಮತ್ತು ಅದನ್ನು ವಿಸ್ತರಿಸಲಾಗದು. ಒಂದು ವೇಳೆ ಅಪ್ರಾಪ್ತ ವಯಸ್ಕರು ಪರಸ್ಪರ ಸ್ನೇಹಿತರನ್ನು ಹೊಂದಿಲ್ಲದ ಯಾರಿಂದಲಾದರೂ ಸ್ನೇಹಿತರ ವಿನಂತಿಯನ್ನು ಸ್ವೀಕರಿಸಿದರೆ, ಆ ವ್ಯಕ್ತಿ ಅವರಿಗೆ ಪರಿಚಿತರಾಗಿರುವವರು ಎಂದು ಖಚಿತಪಡಿಸಿಕೊಳ್ಳಲು, ಅವರು ಸಂವಹನ ನಡೆಸುವುದನ್ನು ಆರಂಭಿಸುವುದಕ್ಕೆ ಮುನ್ನ ನಾವು ಒಂದು ಎಚ್ಚರಿಕೆಯನ್ನು ನೀಡುತ್ತೇವೆ. ಇದರ ಪರಿಣಾಮವಾಗಿ, Snapchat ನಲ್ಲಿ ಅಪ್ರಾಪ್ತವಯಸ್ಕರು ಸ್ವೀಕರಿಸುವ ಸ್ನೇಹಿತರ ಕೋರಿಕೆಗಳಲ್ಲಿ ಅಂದಾಜು 90% ಕನಿಷ್ಟ ಒಬ್ಬ ಸಾಮಾನ್ಯ ಪರಸ್ಪರ ಸ್ನೇಹಿತನನ್ನು ಹೊಂದಿರುವವರದ್ದಾಗಿರುತ್ತದೆ. ಈಗಾಗಲೇ ಪರಿಚಿತರಲ್ಲದವರು ಒಬ್ಬರನ್ನು ಸಂಪರ್ಕಿಸುವುದನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಷ್ಟವಾಗಿಸುವುದು ನಮ್ಮ ಗುರಿಯಾಗಿದೆ.
ಅನಪೇಕ್ಷಿತ ಕಂಟೆಂಟ್ ಅಥವಾ ಉಲ್ಲಂಘಿಸುವ ಕಂಟೆಂಟ್ ಅನ್ನು ವರದಿ ಮಾಡುವಂತೆ ನಾವು Snapchatter ಗಳನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಉಲ್ಲಂಘನೆ ಮಾಡುವ ಖಾತೆಯನ್ನು ನಾವು ನಿರ್ಬಂಧಿಸುತ್ತೇವೆ. Snapchat ಅಕೌಂಟ್ ಹೊಂದಿಲ್ಲದ ಆದರೆ ವರದಿ ಮಾಡಲು ಬಯಸುವ ಜನರಿಗಾಗಿ, ನಮ್ಮ ವೆಬ್‌ಸೈಟ್‌ನಲ್ಲಿ ನಾವು ವರದಿ ಮಾಡುವಿಕೆ ಟೂಲ್‌ಗಳನ್ನು ಕೂಡ ಒದಗಿಸುತ್ತೇವೆ. ಎಲ್ಲ ವರದಿಗಳು ಗೌಪ್ಯವಾಗಿರುತ್ತವೆ ಮತ್ತು ಪ್ರತಿ ವರದಿಯನ್ನು ವಿಮರ್ಶಿಸಲು ಹಾಗೂ ನಿರಂತರವಾಗಿ ನಮ್ಮ ನಿಯಮಗಳನ್ನು ಜಾರಿಗೊಳಿಸಲು ವಿಶ್ವಾದ್ಯಂತ ನಮ್ಮ ನಂಬಿಕೆ ಮತ್ತು ಸುರಕ್ಷತೆ ತಂಡ ದಿನಕ್ಕೆ 24 ತಾಸು, ವಾರಕ್ಕೆ ಏಳು ದಿನಗಳ ಕಾಲ ಕಾರ್ಯನಿರ್ವಹಿಸುತ್ತದೆ.
ಕಾನೂನುಬಾಹಿರ ಅಥವಾ ಸಂಭಾವ್ಯತಃ ಹಾನಿಕಾರಕ ಕಂಟೆಂಟ್ ವಿರುದ್ಧ ನಾವು ಕ್ರಮ ತೆಗೆದುಕೊಂಡಾಗ, ನಾವು ವಿಸ್ತರಿತ ಅವಧಿಯವರೆಗೆ ಸಾಕ್ಷ್ಯವನ್ನು ಇರಿಸಿಕೊಳ್ಳುತ್ತೇವೆ, ಇದರಿಂದ ಕಾನೂನು ಜಾರಿ ಸಂಸ್ಥೆಗಳಿಗೆ ಅವರ ತನಿಖೆಯಲ್ಲಿ ಸಹಕಾರ ನೀಡಲು ನಮಗೆ ಅನುಕೂಲವಾಗುತ್ತದೆ. ತಕ್ಷಣದ ಸಾವಿನ ಅಪಾಯ ಅಥವಾ ಗಂಭೀರ ದೈಹಿಕ ಹಾನಿಯ ಅಪಾಯವನ್ನು ಒಳಗೊಂಡಿದೆ ಎಂಬಂತೆ ಕಾಣುವ ಯಾವುದೇ ಕಂಟೆಂಟ್ ಅನ್ನು ಕೂಡ ನಾವು ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡುತ್ತೇವೆ ಹಾಗೂ ತುರ್ತು ಡೇಟಾ ಬಹಿರಂಗಪಡಿಸುವಿಕೆ ವಿನಂತಿಗಳಿಗೆ ಸಾಮಾನ್ಯವಾಗಿ 30 ನಿಮಿಷಗಳ ಒಳಗೆ ಪ್ರತಿಸ್ಪಂದಿಸುತ್ತೇವೆ. Snapchat ಅನ್ನು ದುರ್ಬಳಕೆ ಮಾಡುವ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ನಾವು ಬಯಸುತ್ತೇವೆ.
ನಮ್ಮ ಸಮುದಾಯಕ್ಕೆ ಮೂರು ಪ್ರಮುಖ ಬೆದರಿಕೆಗಳಿವೆ, ಅವುಗಳನ್ನು ನಮ್ಮ ಸೇವೆಯಿಂದ ತೊಡೆದುಹಾಕಲು ನಾವು ಕೆಲಸ ಮಾಡುತ್ತಿದ್ದೇವೆ: ಸುಲಿಗೆ, ಮಕ್ಕಳ ಲೈಂಗಿಕ ಶೋಷಣೆ ಸಾಮಗ್ರಿಯ ವಿತರಣೆ ಮತ್ತು ಅಕ್ರಮ ಮಾದಕಪದಾರ್ಥಗಳು.
ಮೊದಲನೆಯದು ಆರ್ಥಿಕ ದುರುದ್ದೇಶದ ಲೈಂಗಿಕ ಸುಲಿಗೆಯಲ್ಲಿನ ಕಳವಳಕಾರಿ ಏರಿಕೆಯಾಗಿದ್ದು, ಇದರಲ್ಲಿ ಅಪರಾಧಿಗಳು ಸಂಭಾವ್ಯ ಪ್ರೇಮಿಗಳಂತೆ ಸೋಗು ಹಾಕುತ್ತಾರೆ ಮತ್ತು ನಗ್ನ ಚಿತ್ರಗಳನ್ನು ಕಳುಹಿಸುವಂತೆ ಸಂತ್ರಸ್ತರ ಮನವೊಲಿಸುತ್ತಾರೆ. ನಂತರ ಅಪರಾಧಿಗಳು ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಮತ್ತು ಹೆಚ್ಚಾಗಿ ಉಡುಗೊರೆ ಕಾರ್ಡ್‌ಗಳ ರೂಪದಲ್ಲಿ ಪಾವತಿಗೆ ಬೇಡಿಕೆ ಇರಿಸುತ್ತಾರೆ, ಉಡುಗೊರೆ ಕಾರ್ಡ್‌ನ ಫೋಟೋ ತೆಗೆದು ಚಾಟ್ ಮೂಲಕ ಹಂಚಿಕೊಳ್ಳಬಹುದಾಗಿರುತ್ತದೆ. ಇವುಗಳಲ್ಲಿ ಹಲವು ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್ ಹೊರಗಿನ ವಂಚಕರನ್ನು ಒಳಗೊಂಡಿರುತ್ತವೆ, ಇದು ಕಾನೂನು ಪ್ರಕ್ರಿಯೆ ಮೂಲಕ ಕ್ರಮ ಜಾರಿಗೊಳಿಸುವಿಕೆಯನ್ನು ಹೆಚ್ಚು ಸವಾಲಿನದನ್ನಾಗಿ ಮಾಡುತ್ತದೆ.
ಈ ಹೆಚ್ಚುತ್ತಿರುವ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ನಮ್ಮ ಸೇವೆಯಲ್ಲಿ ಈ ವಂಚಕರನ್ನು ಪೂರ್ವಭಾವಿಯಾಗಿ ಪತ್ತೆಮಾಡಲು ಹಾಗೂ ಸಂಭಾಷಣೆಯು ಸುಲಿಗೆಯ ಹಂತಕ್ಕೆ ತಲುಪುವುದಕ್ಕೆ ಮುನ್ನ ಮಧ್ಯಪ್ರವೇಶಿಸಲು ನಾವು ಹೊಸ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಕಿರುಕುಳ ಅಥವಾ ಲೈಂಗಿಕ ಕಂಟೆಂಟ್ ಅನ್ನು ನಮ್ಮ ಸಮುದಾಯವು ನಮಗೆ ವರದಿ ಮಾಡಿದಾಗ, ನಮ್ಮ ತಂಡವು ಸಾಮಾನ್ಯವಾಗಿ 15 ನಿಮಿಷಗಳ ಒಳಗೆ ಕ್ರಮ ತೆಗೆದುಕೊಳ್ಳುವ ಮೂಲಕ ತ್ವರಿತವಾಗಿ ಸ್ಪಂದಿಸುತ್ತದೆ.
ಎರಡನೆಯದಾಗಿ, ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳ ದೌರ್ಜನ್ಯದ ಚಿತ್ರಗಳು ಮತ್ತು ವೀಡಿಯೊಗಳನ್ನು ನಮ್ಮ ಸೇವೆಯಲ್ಲಿ ಹಂಚಿಕೊಳ್ಳುವ ಮೂಲಕ ಅವರನ್ನು ಮರು-ಸಂತ್ರಸ್ತರನ್ನಾಗಿಸಲು ಯತ್ನಿಸುವ ಅಪರಾಧಿಗಳನ್ನು ಕೂಡ ನಾವು ಗುರುತಿಸುತ್ತಿದ್ದೇವೆ. ತಿಳಿದಿರುವ ಮಕ್ಕಳ ಲೈಂಗಿಕ ದೌರ್ಜನ್ಯದ ಸಾಮಗ್ರಿಗಳಿಗಾಗಿ Snapchat ಗೆ ಅಪ್‌ಲೋಡ್ ಮಾಡಿದ ಚಿತ್ರ ಮತ್ತು ವೀಡಿಯೊವನ್ನು ನಾವು ತಪಾಸಣೆ ಮಾಡುತ್ತೇವೆ ಹಾಗೂ ಕಾಣೆಯಾಗಿರುವ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ ಅದನ್ನು ವರದಿ ಮಾಡುತ್ತೇವೆ. 2023 ರಲ್ಲಿ ನಾವು 690,000 ವರದಿಗಳನ್ನು ಮಾಡಿದ್ದು ಇದರಿಂದಾಗಿ 1,000 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ. ತಿಳಿದಿರುವ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಣಕ್ಕಾಗಿ ಅಪ್‌ಲೋಡ್‌ಗಳನ್ನು ತಪಾಸಣೆ ಮಾಡದಂತೆ ನಮ್ಮನ್ನು ತಡೆಯಬಹುದಾದ ರೀತಿಯಲ್ಲಿ ಎನ್‌ಕ್ರಿಪ್ಶನ್ ಜಾರಿಗೊಳಿಸುವ ಕುರಿತು ನಾವು ಚಿಂತನೆ ನಡೆಸುತ್ತಿಲ್ಲ.
ಮೂರನೆಯದು, ಕಳೆದ ವರ್ಷ 100,000 ಕ್ಕೂ ಅಧಿಕ ಅಮೆರಿಕನ್ನರ ಸಾವಿಗೆ ಕಾರಣವಾದ ಚಾಲ್ತಿಯಲ್ಲಿರುವ ಮತ್ತು ವಿನಾಶಕಾರಿ ಫೆಂಟಾನಿಲ್ ಬಿಕ್ಕಟ್ಟು. ನಮ್ಮ ಸೇವೆಯಿಂದ ಡ್ರಗ್ ಡೀಲರ್‌ಗಳು ಮತ್ತು ಡ್ರಗ್-ಸಂಬಂಧಿತ ಕಂಟೆಂಟ್ ತೆಗೆದುಹಾಕಲು ನಾವು ಬದ್ಧರಾಗಿದ್ದೇವೆ. ನಾವು ಕಾನೂನುಬಾಹಿರ ಮಾದಕಪದಾರ್ಥದ ಕಂಟೆಂಟ್‌ಗಾಗಿ ನಮ್ಮ ಸೇವೆಯನ್ನು ಪೂರ್ವಭಾವಿಯಾಗಿ ತಪಾಸಣೆ ಮಾಡುತ್ತೇವೆ, ಡ್ರಗ್ ಡೀಲರ್ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ ಮತ್ತು ನಮ್ಮ ಸೇವೆಯನ್ನು ಪ್ರವೇಶಿಸದಂತೆ ಅವರ ಸಾಧನಗಳನ್ನು ನಿಷೇಧಿಸುತ್ತೇವೆ, ಸಾಕ್ಷ್ಯವನ್ನು ಉಳಿಸಿಕೊಳ್ಳುತ್ತೇವೆ ಮತ್ತು ಮಾದಕಪದಾರ್ಥ ನಿಯಂತ್ರಣ ಮಂಡಳಿ ಸೇರಿದಂತೆ ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡುತ್ತೇವೆ. 2023 ರಲ್ಲಿ, ನಾವು 2.2 ಮಿಲಿಯನ್‌ಗೂ ಅಧಿಕ ಮಾದಕಪದಾರ್ಥ ಸಂಬಂಧಿತ ಕಂಟೆಂಟ್‌ನ ತುಣುಕುಗಳನ್ನು ತೆಗೆದುಹಾಕಿದೆವು, ಸಂಬಂಧಿಸಿದ 705,000 ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆವು ಮತ್ತು ಆ ಖಾತೆಗಳಿಗೆ ಸಂಬಂಧಿಸಿದ ಸಾಧನಗಳನ್ನು Snapchat ಬಳಸದಂತೆ ಬ್ಲಾಕ್ ಮಾಡಿದೆವು.
ನಾವು ಮಾದಕಪದಾರ್ಥ-ಸಂಬಂಧಿತ ಹುಡುಕಾಟದ ಪದಗಳನ್ನು ನಿರ್ಬಂಧಿಸುತ್ತೇವೆ ಮತ್ತು ಮಾದಕಪದಾರ್ಥಗಳಿಗಾಗಿ ಹುಡುಕುವ ಜನರನ್ನು ನಮ್ಮ ಸೇವೆಯಲ್ಲಿನ ಶೈಕ್ಷಣಿಕ ಸಾಮಗ್ರಿಗಳತ್ತ ಮರುನಿರ್ದೇಶಿಸುತ್ತೇವೆ. ಫೆಂಟಾನಿಲ್ ವಿಶಿಷ್ಟ ಬೆದರಿಕೆಯನ್ನು ಒಡ್ಡುತ್ತದೆ, ಏಕೆಂದರೆ ಇದು ಅಸಾಧಾರಣ ಸ್ವರೂಪದಲ್ಲಿ ಪ್ರಾಣಾಂತಿಕವಾಗಿದೆ ಮತ್ತು ಬೀದಿಯಲ್ಲಿ ಸಿಗುವ ಪ್ರತಿ ವಿಧದ ಮಾದಕಪದಾರ್ಥ ಮತ್ತು ನಕಲಿ ಮಾತ್ರೆಗಳ ಮೇಲೆ ಇದರ ಲೇಪನವಿದೆ. ಆದಕಾರಣ ನಾವು ಶಿಕ್ಷಣ ಬಹಳ ಮುಖ್ಯವಾದುದು ಎಂದು ನಂಬಿದ್ದೇವೆ ಮತ್ತು ನಕಲಿ ಮಾತ್ರೆಗಳ ಅಪಾಯಗಳ ಕುರಿತು ನಮ್ಮ ಸಮುದಾಯಕ್ಕೆ ಅರಿವು ಮೂಡಿಸಲು Snapchat ನಲ್ಲಿ 260 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದಿರುವ "One Pill Can Kill" ಮತ್ತು ಜಾಹೀರಾತು ಕೌನ್ಸಿಲ್‌ನ "Real Deal on Fentanyl" ರೀತಿಯ ಸಾರ್ವಜನಿಕ ಜಾಗೃತಿ ಅಭಿಯಾನಗಳಲ್ಲಿ ಹೂಡಿಕೆ ಮಾಡಿದ್ದೇವೆ.
iOS ಮತ್ತು Android ಆಪರೇಟಿಂಗ್ ಸಿಸ್ಟಂಗಳ ಭಾಗವಾಗಿ ಲಭ್ಯವಿರುವ ಪೋಷಕರ ನಿಯಂತ್ರಣಗಳ ಜೊತೆ ಹೆಚ್ಚುವರಿಯಾಗಿ, ಹದಿಹರೆಯದ ಮಕ್ಕಳ Snapchat ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಪರಿಕರಗಳನ್ನು ಒದಗಿಸುವ ಮೂಲಕ ಪೋಷಕರನ್ನು ಸಬಲಗೊಳಿಸಲು ನಾವು ಕೆಲಸ ಮಾಡಿದ್ದೇವೆ. ನಮ್ಮ ಸೇವೆಯನ್ನು ಬಳಸಿಕೊಂಡು ಅವರ ಹದಿಹರೆಯದ ಮಕ್ಕಳು ಸಂವಹನ ನಡೆಸುತ್ತಿರುವ ಜನರ ಪಟ್ಟಿಯನ್ನು ನೋಡಲು ಪೋಷಕರು ನಮ್ಮ ಕೌಟುಂಬಿಕ ಕೇಂದ್ರವನ್ನು ಬಳಸಬಹುದು. ಇದು ನೈಜ ಜಗತ್ತಿನಲ್ಲಿ ತಮ್ಮ ಹದಿಹರೆಯದ ಮಕ್ಕಳ ಮೇಲೆ ಪೋಷಕರು ನಿಗಾ ಇರಿಸುವ ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಾವು ನಂಬಿದ್ದೇವೆ - ಅಂದರೆ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿಯಲು ಪೋಷಕರು ಬಯಸುತ್ತಾರೆ ಆದರೆ ಮಕ್ಕಳ ಪ್ರತಿ ಖಾಸಗಿ ಸಂಭಾಷಣೆಯನ್ನೂ ಆಲಿಸಬೇಕಾಗಿಲ್ಲ. ಕೌಟುಂಬಿಕ ಕೇಂದ್ರವು ಗೌಪ್ಯತೆ ಸೆಟ್ಟಿಂಗ್‌ಗಳನ್ನು ವಿಮರ್ಶಿಸಲು ಮತ್ತು ಕಂಟೆಂಟ್ ನಿಯಂತ್ರಣಗಳನ್ನು ಹೊಂದಿಸಲು ಸಹ ಪೋಷಕರಿಗೆ ಅನುವು ಮಾಡಿಕೊಡುತ್ತದೆ.
ಈ ವಿಚಾರಣೆಯು ಮಕ್ಕಳ ಆನ್‌ಲೈನ್ ಸುರಕ್ಷತೆ ಕಾಯ್ದೆ ಮತ್ತು ಕೂಪರ್ ಡೇವಿಸ್ ಕಾಯ್ದೆಯಂತಹ ಮಹತ್ವದ ಶಾಸನಗಳನ್ನು ರೂಪಿಸಲು ಒಂದು ಅವಕಾಶವಾಗಿದೆ ಎಂದು ನಾನು ಆಶಿಸುತ್ತೇನೆ. ನಾವು ಈ ಶಾಸನವನ್ನು ಕೇವಲ ಮಾತಿನಲ್ಲಷ್ಟೇ ಅಲ್ಲ ಕೃತಿಯಲ್ಲೂ ಬೆಂಬಲಿಸುತ್ತೇವೆ ಮತ್ತು ಅದು ಔಪಚಾರಿಕ, ಕಾನೂನು ಬಾಧ್ಯತೆಯಾಗುವುದಕ್ಕಿಂತ ಮುಂಚೆ ನಮ್ಮ ಸೇವೆಯು ಶಾಸನಾತ್ಮಕ ಅಗತ್ಯಗಳ ಅನುಸರಣೆ ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡಿದ್ದೇವೆ. ಹದಿಹರೆಯದವರು ಯಾರೊಂದಿಗೆ ಸಂವಹನ ನಡೆಸಬಹುದು ಎನ್ನುವುದನ್ನು ಸ್ನೇಹಿತರು ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತಗೊಳಿಸುವುದು, ಆ್ಯಪ್‌ನಲ್ಲಿ ಪೋಷಕರ ಟೂಲ್‌ಗಳನ್ನು ಒದಗಿಸುವುದು, ಹಾನಿಕಾರಕ ಕಂಟೆಂಟ್ ಅನ್ನು ಪೂರ್ವಭಾವಿಯಾಗಿ ಗುರುತಿಸುವುದು ಮತ್ತು ತೆಗೆದುಹಾಕುವುದು ಹಾಗೂ ಮಾರಣಾಂತಿಕ ಮಾದಕಪದಾರ್ಥದ ಕಂಟೆಂಟ್ ಅನ್ನು ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡುವುದನ್ನು ಇದು ಒಳಗೊಂಡಿದೆ. CSAM ನಿಲ್ಲಿಸಿ ಕಾಯ್ದೆಗೆ ಸಂಬಂಧಿಸಿದ ಸಮಿತಿಯ ಜೊತೆಗೆ ಕಾರ್ಯನಿರ್ವಹಿಸುವುದನ್ನು ನಾವು ಮುಂದುವರಿಸಿದ್ದೇವೆ, ಇದು ಆನ್‌ಲೈನ್ ಸೇವೆಗಳಿಂದ ಮಕ್ಕಳ ಲೈಂಗಿಕ ಶೋಷಣೆಯನ್ನು ನಿವಾರಿಸುವ ದಿಸೆಯಲ್ಲಿ ಅರ್ಥಪೂರ್ಣ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ನಾವು ನಂಬಿದ್ದೇವೆ.
ಇಂದಿನ ಬಹುತೇಕ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಇಂಟರ್‌ನೆಟ್ ಕಂಪನಿಗಳು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಸ್ಥಾಪನೆಯಾದಂಥವು ಮತ್ತು ನಾವು ಕೇವಲ ತಾಂತ್ರಿಕ ಆವಿಷ್ಕಾರದಲ್ಲಿ ಮಾತ್ರವಲ್ಲ ಚತುರ ನಿಯಂತ್ರಣದಲ್ಲೂ ಕೂಡ ಮುನ್ನಡೆಸಬೇಕು. ಆದಕಾರಣ ನಾವು ಎಲ್ಲ ಅಮೆರಿಕನ್ನರ ಡೇಟಾ ಗೌಪ್ಯತೆಯನ್ನು ರಕ್ಷಿಸುವ ಮತ್ತು ಎಲ್ಲ ಆನ್‌ಲೈನ್ ಸೇವೆಗಳಿಗಾಗಿ ಸ್ಥಿರವಾದ ಗೌಪ್ಯತೆ ಮಾನದಂಡಗಳನ್ನು ರಚಿಸುವ ಸಮಗ್ರ ಫೆಡರಲ್ ಗೌಪ್ಯತೆ ಕಾಯ್ದೆಯನ್ನು ಬೆಂಬಲಿಸುತ್ತೇವೆ.
ನಮ್ಮ ಸಮುದಾಯವನ್ನು, ಮತ್ತು ವಿಶೇಷವಾಗಿ ಯುವಜನರನ್ನು ಸುರಕ್ಷಿತವಾಗಿರಿಸುವ ನಮ್ಮ ಧ್ಯೇಯಕ್ಕೆ ಸಮಾನ ಉದ್ದೇಶ ಹೊಂದಿರುವ ಉದ್ಯಮ, ಸರ್ಕಾರ ಮತ್ತು ಲಾಭರಹಿತ ಹಾಗೂ ಎನ್‌ಜಿಒಗಳಾದ್ಯಂತದ ಎಲ್ಲ ಅಸಾಧಾರಣ ಪಾಲುದಾರರು ಮತ್ತು ಸಹಭಾಗಿಗಳಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ನಮ್ಮ ಈ ಪ್ರಯತ್ನಗಳಿಗೆ ಮೂಲಾಧಾರವಾಗಿರುವ ಕಾನೂನು ಜಾರಿ ಸಂಸ್ಥೆಗೆ ಮತ್ತು ಮೊದಲ ಪ್ರತಿಕ್ರಿಯಾದಾರರಿಗೆ ನಾನು ನಿರ್ದಿಷ್ಟವಾಗಿ ಆಭಾರಿಯಾಗಿದ್ದೇನೆ. ಸಂಕ್ಷಿಪ್ತತೆಗಾಗಿ ಮತ್ತು ಯಾರ ಹೆಸರನ್ನಾದರೂ ಬಿಟ್ಟುಬಿಡಬಹುದು ಎನ್ನುವ ಭಯಕ್ಕಾಗಿ, ನಾನು ಎಲ್ಲರನ್ನೂ ಪ್ರತ್ಯೇಕವಾಗಿ ಪಟ್ಟಿ ಮಾಡುವುದಿಲ್ಲ ಆದರೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಯನ್ನು ದಯವಿಟ್ಟು ಸ್ವೀಕರಿಸಿ.
Snapchat ಬಳಸುವುದು ತಮಗೆ ಸಂತಸ ತರುತ್ತದೆ ಎಂದು ನಮ್ಮ ಸಮುದಾಯದವರು ನಿರಂತರವಾಗಿ ಹೇಳುತ್ತಾರೆ ಮತ್ತು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸ್ನೇಹಿತರು ಮತ್ತು ಕುಟುಂಬದವರ ಜೊತೆಗಿನ ಸಂಬಂಧಗಳು ಮಹತ್ವದ್ದಾಗಿವೆ ಎಂದು ನಮಗೆ ತಿಳಿದಿದೆ. ಇತ್ತೀಚೆಗೆ ನಾವು ಚಿಕಾಗೊ ವಿಶ್ವವಿದ್ಯಾಲಯದ ರಾಷ್ಟ್ರೀಯ ಅಭಿಪ್ರಾಯ ಸಂಶೋಧನಾ ಕೇಂದ್ರದಿಂದ ಕೈಗೊಂಡ ಸಂಶೋಧನೆಯಲ್ಲಿ, ಕುಟುಂಬದೊಂದಿಗೆ ತಮ್ಮ ಸ್ನೇಹ ಮತ್ತು ಸಂಬಂಧದ ಗುಣಮಟ್ಟದ ಬಗ್ಗೆ Snapchat ಬಳಸುವ ಪ್ರತಿಕ್ರಿಯಾದಾರರು Snapchatter ಅಲ್ಲದವರಿಗಿಂತ ಅಧಿಕ ಸಂತೃಪ್ತಿ ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ. ಜಗತ್ತಿನಲ್ಲಿ ಸಕಾರಾತ್ಮಕ ಪ್ರಭಾವ ಉಂಟುಮಾಡುವ ನಮ್ಮ ತೀವ್ರ ಆಕಾಂಕ್ಷೆಯು ನಮ್ಮ ಸೇವೆಯನ್ನು ಸುರಕ್ಷಿತ ಮತ್ತು ಆರೋಗ್ಯಕರ ವಿಧಾನದಲ್ಲಿ ಬಳಸಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ದಿನ ನಮ್ಮನ್ನು ಪ್ರೇರೇಪಿಸುತ್ತದೆ.
ಮೂಲಭೂತವಾಗಿ, ಆನ್‌ಲೈನ್ ಸಂವಹನವು ಆಫ್‌ಲೈನ್ ಸಂವಹನಕ್ಕಿಂತ ಸುರಕ್ಷಿತವಾಗಿರಬೇಕು ಎಂದು ನಾವು ನಂಬುತ್ತೇವೆ. ಆನ್‌ಲೈನ್ ಸೇವೆಗಳನ್ನು ಬಳಸುವುದರಲ್ಲಿ ಒಳಗೊಂಡಿರುವ ಎಲ್ಲ ಅಪಾಯಗಳನ್ನು ನಿವಾರಿಸಲು ವಸ್ತುಶಃ ಸಾಧ್ಯವಿಲ್ಲದಿರಬಹುದು ಎನ್ನುವುದನ್ನು ನಾವು ಮನಗಾಣುತ್ತೇವಾದರೂ, Snapchat ಸಮುದಾಯವನ್ನು ರಕ್ಷಿಸಲು ನಮ್ಮ ಕರ್ತವ್ಯವನ್ನು ಮಾಡುವುದರ ಬಗ್ಗೆ ನಾವು ಬದ್ಧರಾಗಿದ್ದೇವೆ. ಯುವ ಜನರು ನಮ್ಮ ದೇಶದ ಭವಿಷ್ಯವಾಗಿದ್ದಾರೆ ಮತ್ತು ಅವರನ್ನು ರಕ್ಷಿಸಲು ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು.
ಧನ್ಯವಾದಗಳು.