New Research Shows Australian Parents Worry Under-16 Ban Won’t Make Teens Safer
ಡಿಸೆಂಬರ್ 2025 ರಲ್ಲಿ, ಆಸ್ಟ್ರೇಲಿಯಾವು Snapchat ಸೇರಿದಂತೆ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನಿರ್ದಿಷ್ಟ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆಯನ್ನು ನಿಷೇಧಿಸಿದ ವಿಶ್ವದ ಮೊದಲ ದೇಶವಾಗಿದೆ.
ಸಾಮಾಜಿಕ ಮಾಧ್ಯಮ ಕನಿಷ್ಠ ವಯಸ್ಸಿನ ಕಾನೂನು, ಸಂದೇಶ ಕಳುಹಿಸುವ ವೇದಿಕೆಗಳನ್ನು ಹೊರತುಪಡಿಸಿದೆ ಮತ್ತು Snapchat ಮುಖ್ಯವಾಗಿ ಸಂವಹನ ವೇದಿಕೆಯಾಗಿ ಬಳಸಲ್ಪಡುವ ಕಾರಣ, ಅಂತಹ ನಿಷೇಧಗಳಿಗೆ ಒಳಗಾಗಬೇಕು ಎಂದು ನಾವು ನಂಬುವುದಿಲ್ಲ. ಅದೇನೇ ಇದ್ದರೂ 4,50,000 ಕ್ಕೂ ಹೆಚ್ಚು ಆಸ್ಟ್ರೇಲಿಯಾದ Snapchat ಖಾತೆಗಳನ್ನು ನಿರ್ಬಂಧಿಸುವ ಅಥವಾ ನಿಷ್ಕ್ರಿಯಗೊಳಿಸುವ ಮೂಲಕ ನಾವು ಕಾನೂನನ್ನು ಅನುಸರಣೆ ಮಾಡಿದ್ದೇವೆ. ನಾವು ಪ್ರತಿದಿನ ಹೆಚ್ಚುವರಿ ತೆಗೆದುಹಾಕುವಿಕೆಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಈ ಕಾನೂನಿನಿಂದ ನಿಗದಿಪಡಿಸಲಾದ ಅಗತ್ಯಗಳನ್ನು ಪೂರೈಸಲು ಆಸ್ಟ್ರೇಲಿಯಾದ ಇ-ಸುರಕ್ಷತಾ ಆಯುಕ್ತರೊಂದಿಗೆ ಕೆಲಸ ಮಾಡುತ್ತೇವೆ.
ಈಗ ಪ್ರಶ್ನೆ ಏನೆಂದರೆ, ಈ ನಿಷೇಧವು ಆಸ್ಟ್ರೇಲಿಯಾದ ಹದಿಹರೆಯದವರನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆಯೇ ಅಥವಾ ಆಚರಣೆಯಲ್ಲಿ ಅವರ ಯೋಗಕ್ಷೇಮವನ್ನು ಸುಧಾರಿಸುತ್ತದೆಯೇ ಎಂಬುದಾಗಿದೆ?
ಪ್ರಪಂಚದಾದ್ಯಂತ ಪೋಷಕರು ಮತ್ತು ನೀತಿ ರೂಪಕರ ಗುರಿಯಾದ — ಹದಿಹರೆಯದವರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವ — ಉದ್ದೇಶವನ್ನು ನಾವು ಕೂಡ ಹೊಂದಿದ್ದೇವೆ, ಇದೇ ವೇಳೆ ಸಂಸ್ಥೆಯಾಗಿ ನಾವು ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಯುವಜನರನ್ನು ರಕ್ಷಿಸಲು ಸರ್ಕಾರಗಳು ಮಾಡುವ ಆಯ್ಕೆಗಳು ತಮ್ಮ ಉದ್ದೇಶಿತ ಪರಿಣಾಮವನ್ನು ಬೀರುತ್ತವೆ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ.
ಈ ಹಂತದಲ್ಲಿ ಆಸ್ಟ್ರೇಲಿಯಾದ ನಿಷೇಧವು ಹದಿಹರೆಯದವರು ಮತ್ತು ಪೋಷಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಿರ್ಬಂಧಗಳು ಜಾರಿಗೆ ಬಂದ ಸುಮಾರು ಹತ್ತು ವಾರಗಳ ನಂತರ, ಆಸ್ಟ್ರೇಲಿಯಾದ ಹದಿಹರೆಯದವರ (13-17 ವಯಸ್ಸಿನವರು) 500 ಪೋಷಕರ ಸಮೀಕ್ಷೆ ನಡೆಸುವ ಕಾರ್ಯವನ್ನು ನಾವು YouGov ಗೆ ನಿಯೋಜಿಸಿದ್ದೇವೆ. ಸಂಶೋಧನೆಯು ಕಂಡುಕೊಂಡದ್ದು ಇಲ್ಲಿದೆ:
ಪೋಷಕರಲ್ಲಿರುವ ಅತಿದೊಡ್ಡ ಕಳವಳವೆಂದರೆ ತಮ್ಮ ಹದಿಹರೆಯದ ಮಕ್ಕಳು ಕಡಿಮೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬುದಾಗಿದೆ. 5 ರಲ್ಲಿ 4 ಕ್ಕಿಂತ ಹೆಚ್ಚು ಪೋಷಕರು, ಮೇಲ್ವಿಚಾರಣೆ ಮಾಡುವುದು ಕಷ್ಟಕರವಾದ ವೇದಿಕೆಗಳಿಗೆ ತಮ್ಮ ಹದಿಹರೆಯದವರು ಸ್ಥಳಾಂತರಗೊಳ್ಳುವ ಕುರಿತು ಚಿಂತಿತರಾಗಿದ್ದಾರೆ. 20% ಜನರು ಈ ವಲಸೆಯು ಈಗಾಗಲೇ ಸಂಭವಿಸಿದೆ ಎಂದು ಹೇಳುತ್ತಾರೆ ಮತ್ತು ಆ ಪೋಷಕರಲ್ಲಿ 60% ಜನರು ಹೊಸ ವೇದಿಕೆಗಳು ಇನ್ನಷ್ಟು ಹೆಚ್ಚಿನ ಅಪಾಯಗಳನ್ನು ಒಡ್ಡಬಹುದು ಎಂಬ ಕುರಿತು ಕಳವಳಗೊಂಡಿದ್ದಾರೆ. ಆ ಪೋಷಕರಲ್ಲಿ ಅರ್ಧಕ್ಕಿಂತ ಕಡಿಮೆ ಜನರು (47%) ಆ ಹೊಸ ವೇದಿಕೆಗಳು ಸಮರ್ಪಕ ಪೋಷಕರ ನಿಯಂತ್ರಣಗಳನ್ನು ಹೊಂದಿವೆ ಎಂದು ನಂಬಿದ್ದಾರೆ. ಹದಿಹರೆಯದವರು ಕಂಡುಕೊಂಡಿದ್ದಾರೆ ಎಂದು ಪೋಷಕರು ಹೇಳುತ್ತಿರುವ ಪರ್ಯಾಯಗಳಲ್ಲಿ WhatsApp (65%), Messenger (49%), Discord (34%) ಮತ್ತು Roblox (32%) ಸೇರಿವೆ — ಇವು ನಿಷೇಧಕ್ಕೆ ಒಳಗಾಗದ (ಕಾರಣಗಳನ್ನು ನಾವು ಒಪ್ಪುವುದಿಲ್ಲ) ವೇದಿಕೆಗಳಾಗಿವೆ.
ನಿಷೇಧವು ಸರಿಯಾದ ವೇದಿಕೆಗಳನ್ನು ಗುರಿಯಾಗಿಸಿಕೊಂಡಿದೆಯೇ ಎಂದು ಪೋಷಕರು ಪ್ರಶ್ನಿಸುತ್ತಾರೆ. 77% ಪೋಷಕರಿಗೆ ನಿರ್ಬಂಧಗಳು ಕೆಲವು ವೇದಿಕೆಗಳಿಗೆ ಅನ್ವಯಿಸುತ್ತವೆ ಇನ್ನು ಕೆಲವಕ್ಕೆ ಅನ್ವಯಿಸುದಿಲ್ಲ ಎಂದು ತಿಳಿದಿದೆ. ಆ ಗುಂಪಿನಲ್ಲಿ, 42% ಜನರು ನಿರ್ಬಂಧಿತ ಮತ್ತು ಅನಿರ್ಬಂಧಿತ ವೇದಿಕೆಗಳನ್ನು ಹದಿಹರೆಯದವರಿಗೆ ಸಮಾನವಾಗಿ ಹಾನಿಕಾರಕವೆಂದು ಪರಿಗಣಿಸುತ್ತಾರೆ ಮತ್ತು ಇನ್ನೊಂದು 9% ಜನರು ನಿರ್ಬಂಧಿತವಲ್ಲದ ವೇದಿಕೆಗಳು ವಾಸ್ತವವಾಗಿ ಹೆಚ್ಚು ಹಾನಿಕಾರಕವಾಗಬಹುದು ಎಂದು ನಂಬಿದ್ದಾರೆ.
ಪೋಷಕರು ತಾತ್ವಿಕವಾಗಿ ನಿರ್ಬಂಧಗಳನ್ನು ಬೆಂಬಲಿಸುತ್ತಾರೆ, ಆದರೆ ಅವರಿಗೆ ಆಚರಣೆಯಲ್ಲಿ ಅವು ಯಶಸ್ವಿಯಾಗುತ್ತವೆಯೇ ಎಂಬ ಅನುಮಾನಗಳಿವೆ. 73% ಆಸ್ಟ್ರೇಲಿಯಾದ ಪೋಷಕರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲಿನ ನಿರ್ಬಂಧಗಳನ್ನು ಬೆಂಬಲಿಸುತ್ತಾರೆ, ಆದರೆ 11% ಮಾತ್ರ ನೀತಿಯು "ಖಂಡಿತವಾಗಿ' ತನ್ನ ಉದ್ದೇಶಿತ ಗುರಿಗಳನ್ನು ಸಾಧಿಸುತ್ತಿದೆ ಎಂದು ಹೇಳುತ್ತಾರೆ ಮತ್ತು ಕೇವಲ 13% ಜನರು ನಿರ್ಬಂಧಗಳನ್ನು ವಾಸ್ತವವಾಗಿ ಜಾರಿಗೊಳಿಸಬಹುದು ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಅರ್ಧಕ್ಕಿಂತ ಹೆಚ್ಚು ಜನ, ಇದನ್ನು ಜಾರಿಗೊಳಿಸುವ ಬಗ್ಗೆ ತಮಗೆ ಯಾವುದೇ ನಂಬಿಕೆ ಇಲ್ಲ ಅಥವಾ ಕಡಿಮೆ ನಂಬಿಕೆ ಇದೆ ಎಂದು ವ್ಯಕ್ತಪಡಿಸಿದ್ದಾರೆ.
ಪೋಷಕರು ಕಾನೂನಿನ ಪರಿಣಾಮಕಾರಿತ್ವದ ಕುರಿತು ಆತ್ಮವಿಶ್ವಾಸ ಹೊಂದಿಲ್ಲ ಮತ್ತು ಅನುಷ್ಠಾನದಲ್ಲಿ ನ್ಯೂನತೆಯನ್ನು ಕಾಣುತ್ತಿದ್ದಾರೆ. 70% ಜನರು ನಿರ್ಬಂಧಗಳನ್ನು ತಪ್ಪಿಸುವುದು ಸುಲಭ ಎಂದು ನಂಬುತ್ತಾರೆ ಮತ್ತು ಸುಮಾರು 5 ರಲ್ಲಿ 4 ಮಂದಿ, ಇದು ಪೋಷಕರಿಗೆ ತಮ್ಮ ಮಕ್ಕಳು ನೈಜ ಸ್ಥಿತಿಗಿಂತ ಆನ್‌ಲೈನ್‌ನಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂಬ ಸುಳ್ಳು ಭದ್ರತೆಯ ಪ್ರಜ್ಞೆಯನ್ನು ನೀಡುತ್ತದೆ ಎಂಬ ಕಳವಳ ಹೊಂದಿದ್ದಾರೆ. ಇವುಗಳು ಕೇವಲ ಅಮೂರ್ತ ಕಳವಳಗಳಲ್ಲ: 62% ಜನರು ನಿರ್ಬಂಧಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುರಿತು ಕನಿಷ್ಠ ಒಂದು ಮೂಲಭೂತ ಸಮಸ್ಯೆಯನ್ನು ಗಮನಿಸಿದ್ದಾರೆ, ಇದರಲ್ಲಿ 22% ಜನರು ತಮ್ಮ ಹದಿಹರೆಯದವರು ಈಗಾಗಲೇ ನಿಷೇಧಿತ ವೇದಿಕೆಗಳನ್ನು ಪ್ರವೇಶಿಸಲು ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ. ಮತ್ತು ಈ ಕಳವಳಗಳನ್ನು ಪೋಷಕರು ಮಾತ್ರ ವ್ಯಕ್ತಪಡಿಸುತ್ತಿಲ್ಲ – ಕಳವಳಗೊಂಡಿರುವ ಪೋಷಕರಲ್ಲಿ 32% ಜನರು ತಮ್ಮ ಹದಿಹರೆಯದ ಮಕ್ಕಳು ತಮ್ಮೊಂದಿಗೆ ಈ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ ಎಂದು ಹೇಳುತ್ತಾರೆ.
ಈ ಸಂಶೋಧನೆಗಳು ಒಟ್ಟಾರೆಯಾಗಿ ಒಂದು ಪ್ರಮುಖ ಅಂಶವನ್ನು ಬಲಪಡಿಸುತ್ತವೆ: ಸಾರ್ವತ್ರಿಕ ನಿಷೇಧಗಳು ತಾತ್ಕಾಲಿಕ ಪರಿಹಾರದಂತೆ ಕಾರ್ಯನಿರ್ವಹಿಸುತ್ತವೆ, ಪೋಷಕರಲ್ಲಿ ಸುಳ್ಳು ಭದ್ರತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತವೆ, ಹಾಗೂ ಈ ನಿರ್ಬಂಧಗಳ ಜಾರಿಯಿಂದ ತಾವು ಕಳೆದುಕೊಂಡ ಸಮುದಾಯಗಳು ಮತ್ತು ನೆನಪುಗಳನ್ನು ಹುಡುಕುತ್ತ ಅವರ ಹದಿಹರೆಯದವರು ಇತರ ವೇದಿಕೆಗಳತ್ತ ಸಾಗುತ್ತಾರೆ. ಯುವಜನರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವ ಹಾದಿಗೆ ಚಿಂತನಶೀಲ, ಸಾಕ್ಷ್ಯ ಆಧಾರಿತ ವಿಧಾನಗಳ ಅಗತ್ಯವಿರುತ್ತದೆ ಮತ್ತು ಸಂಭಾವ್ಯ ಅನಪೇಕ್ಷಿತ ಸವಾಲುಗಳನ್ನು ಸೃಷ್ಟಿಸುವ ಬದಲು ತಮ್ಮ ಹದಿಹರೆಯದವರ ಯೋಗಕ್ಷೇಮವನ್ನು ನಿರ್ವಹಿಸಲು ಸಹಾಯ ಮಾಡುವಲ್ಲಿ ಪೋಷಕರನ್ನು ಬೆಂಬಲಿಸಬೇಕು.
ಯುವಜನರನ್ನು ನೈಜವಾಗಿ ರಕ್ಷಿಸುವ ನೀತಿಗಳು ಮತ್ತು ವೇದಿಕೆ ಮಟ್ಟದ ಸುರಕ್ಷತೆಗಳನ್ನು ಅಭಿವೃದ್ಧಿಪಡಿಸಲು ಪ್ರಪಂಚದಾದ್ಯಂತ ಸರ್ಕಾರಗಳು, ಪೋಷಕರು ಮತ್ತು ಸುರಕ್ಷತಾ ತಜ್ಞರೊಂದಿಗೆ ಕೆಲಸ ಮಾಡಲು Snapchat ಬದ್ಧವಾಗಿದೆ. ಹೆಚ್ಚು ಹೆಚ್ಚು ದೇಶಗಳು ಆನ್‌ಲೈನ್ ಸುರಕ್ಷತಾ ಶಾಸನಗಳನ್ನು ರೂಪಿಸಲು ಪರಿಗಣಿಸುತ್ತಿರುವ ಈ ಸಮಯದಲ್ಲಿ, ಈ ಆರಂಭಿಕ ಸಂಶೋಧನೆಗಳು ನೀತಿ ರೂಪಕರನ್ನು ಆನ್‌ಲೈನ್‌ನಲ್ಲಿ ಹದಿಹರೆಯದವರನ್ನು ರಕ್ಷಿಸುವುದು ಹೇಗೆ ಎಂದು ನಿರ್ಧರಿಸುವಾಗ ಸಾಕ್ಷ್ಯಗಳನ್ನು ನಿಕಟವಾಗಿ ನೋಡಲು ಮತ್ತು ನೈಜ-ಪ್ರಪಂಚದ ಪರಿಣಾಮಗಳನ್ನು ಮಾಪನ ಮಾಡಲು ಪ್ರೋತ್ಸಾಹಿಸುತ್ತವೆ ಎಂದು ನಾವು ಆಶಿಸುತ್ತೇವೆ.
ವಿಧಾನ
ಈ ಸಂಶೋಧನೆಯನ್ನು Snapನಿಂದ ನಿಯೋಜಿಸಲಾಗಿದೆ ಮತ್ತು YouGovನಿಂದ ಕಾರ್ಯಗೊಳಿಸಲಾಗಿದೆ. 2026 ರ ಫೆಬ್ರವರಿ 13 ರಿಂದ ಫೆಬ್ರವರಿ 19 ರವರೆಗೆ, ಆಸ್ಟ್ರೇಲಿಯಾದ ಹದಿಹರೆಯದವರ (13-17 ವಯಸ್ಸಿನವರು) ಪೋಷಕರ ದೇಶದಾದ್ಯಂತದ n=500 ಜನರ ಮಾದರಿಯ ನಡುವೆ ಆನ್‌ಲೈನ್‌ನಲ್ಲಿ ಸಂದರ್ಶನಗಳನ್ನು ನಡೆಸಲಾಯಿತು. 95% ವಿಶ್ವಾಸಾರ್ಹ ಮಟ್ಟದಲ್ಲಿ ಫಲಿತಾಂಶಗಳು ಶೇಕಡಾವಾರು 4.5 ಗಳಷ್ಟು ಹೆಚ್ಚು ಅಥವಾ ಕಡಿಮೆ ಅಂಕಗಳ ದೋಷದ ಅಂಚನ್ನು ಹೊಂದಿವೆ.