ಇವನ್ ಸ್ಪೀಗಲ್ ಅವರು ಸಂಸದೀಯ ಸಮಿತಿ ಮುಂದೆ ನೀಡಿದ ಸಾಕ್ಷ್ಯ

ಜನವರಿ 31, 2024

ಇಂದು, ನಮ್ಮ ಸಹ-ಸಂಸ್ಥಾಪಕ ಮತ್ತು ಸಿಇಒ ಇವನ್ ಸ್ಪೀಗಲ್ ಅವರು ಯುನೈಟೆಡ್ ಸ್ಟೇಟ್ಸ್ ಸಂಸದೀಯ ನ್ಯಾಯಾಂಗ ಸಮಿತಿಯ ಮುಂದೆ ಸಾಕ್ಷಿ ಹೇಳಲು ಇತರ ತಂತ್ರಜ್ಞಾನ ವೇದಿಕೆಗಳ ಜೊತೆಗೆ ಹಾಜರಾದರು. ಸಮಿತಿಯ ಮುಂದೆ ನೀಡಿದ ಇವನ್ ಅವರ ಪೂರ್ಣ ಮೌಖಿಕ ಸಾಕ್ಷ್ಯವನ್ನು ನೀವು ಕೆಳಗೆ ಓದಬಹುದು.

***

ಅಧ್ಯಕ್ಷರಾದ ಡರ್ಬಿನ್ ಅವರೇ, ವಿಪಕ್ಷ ನಾಯಕರಾದ ಗ್ರಹಾಮ್ ಅವರೇ ಮತ್ತು ಸಮಿತಿಯ ಸದಸ್ಯರೇ, ಈ ವಿಚಾರಣೆಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸಲು ಮಹತ್ವದ ಶಾಸನವನ್ನು ಮಂಡನೆ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ.

ನಾನು ಇವನ್ ಸ್ಪೀಗಲ್, Snap ನ ಸಹ-ಸಂಸ್ಥಾಪಕ ಮತ್ತು ಸಿಇಒ. 

ನಾವು Snapchat ಎಂಬ ಆನ್‌ಲೈನ್ ಸೇವೆಯನ್ನು ರಚಿಸಿದ್ದೇವೆ, ಇದನ್ನು ವಿಶ್ವಾದ್ಯಂತ 800 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂವಹನ ನಡೆಸಲು ಬಳಸುತ್ತಾರೆ. 

Snapchat ರಚಿಸುವುದಕ್ಕೆ ಮುಂಚಿನಿಂದಲೂ ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸಲು ನಿಮ್ಮಲ್ಲಿ ಹಲವರು ಕೆಲಸ ಮಾಡುತ್ತಿದ್ದೀರಿ ಎನ್ನುವುದು ನನಗೆ ತಿಳಿದಿದೆ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಸುದೀರ್ಘ ಬದ್ಧತೆ ಹಾಗೂ ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡಲು ಒಟ್ಟಾಗಿ ಕೆಲಸ ಮಾಡುವ ನಿಮ್ಮ ಇಚ್ಛೆಗೆ ನಾವು ಆಭಾರಿಗಳಾಗಿದ್ದೇವೆ.

ಇಲ್ಲಿರುವ ಆನ್‌ಲೈನ್ ಹಾನಿಯ ಸಂತ್ರಸ್ತರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬದವರಿಗೆ ಅವರೊಂದಿಗೆ ನಾವಿದ್ದೇವೆ ಎಂದು ನಾನು ತಿಳಿಸಲು ಬಯಸುತ್ತೇನೆ. 

ಜನರಿಗೆ ಖುಷಿ ಮತ್ತು ಉಲ್ಲಾಸ ತರಲು ನಾವು ವಿನ್ಯಾಸಗೊಳಿಸಿದ ಸೇವೆಯನ್ನು ಜನರಿಗೆ ಹಾನಿ ಎಸಗಲು ದುರ್ಬಳಕೆ ಮಾಡಲಾಗುತ್ತಿದೆ ಎನ್ನುವ ಕುರಿತು ನನಗೆ ಉಂಟಾಗಿರುವ ದುಃಖವನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.

ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುವುದಕ್ಕೆ ನಮ್ಮ ಜವಾಬ್ದಾರಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ.

ಈ ವಿಷಯಗಳ ಕುರಿತಾಗಿ ಜಾಗೃತಿ ಮೂಡಿಸಲು ಕೆಲಸ ಮಾಡಿದ, ಬದಲಾವಣೆಗಾಗಿ ಹಕ್ಕೊತ್ತಾಯ ಮಾಡಿದ ಮತ್ತು ಜೀವ ಉಳಿಸಲು ನೆರವಾಗಬಲ್ಲ ಕೂಪರ್ ಡೇವಿಸ್ ಕಾಯ್ದೆಯಂತಹ ಮಹತ್ವದ ಶಾಸನಗಳಿಗೆ ಸಂಬಂಧಿಸಿ ಜನಪ್ರತಿನಿಧಿಗಳೊಂದಿಗೆ ಸಹಭಾಗಿತ್ವ ಮಾಡಿದ ಹಲವಾರು ಕುಟುಂಬಗಳಿಗೂ ಕೂಡ ನಾನು ಮನ್ನಣೆ ನೀಡಬಯಸುತ್ತೇನೆ.

ನಾನು ಇಪ್ಪತ್ತು ವರ್ಷ ವಯಸ್ಸಿನವನಾಗಿದ್ದಾಗ ನನ್ನ ಸಹ-ಸಂಸ್ಥಾಪಕ ಬಾಬ್ಬಿ ಮರ್ಫಿ ಜೊತೆಗೆ ನಾನು Snapchat ರೂಪಿಸಲು ಆರಂಭಿಸಿದೆ. ನಾವು ಹದಿಹರೆಯದವರಾಗಿದ್ದಾಗ ಅನುಭವಿಸಿದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ನಾವು Snapchat ವಿನ್ಯಾಸಗೊಳಿಸಿದೆವು. 

ನಮಗೆ ಸಾಮಾಜಿಕ ಮಾಧ್ಯಮಕ್ಕೆ ಪರ್ಯಾಯ ಇರಲಿಲ್ಲ. ಅಂದರೆ ಆನ್‌ಲೈನ್‌ನಲ್ಲಿ ಹಂಚಿಕೊಂಡ ಚಿತ್ರಗಳು ಶಾಶ್ವತವಾಗಿದ್ದವು, ಸಾರ್ವಜನಿಕವಾಗಿದ್ದವು ಮತ್ತು ಜನಪ್ರಿಯತೆಯ ಮಾಪನಗಳಿಗೆ ಒಳಪಡುತ್ತಿದ್ದವು. ಅದು ಅಷ್ಟೇನೂ ಹಿತ ಅನ್ನಿಸುತ್ತಿರಲಿಲ್ಲ.

ನಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸಲು ವೇಗ, ವಿನೋದಮಯ ಮತ್ತು ಖಾಸಗಿಯಾಗಿದ್ದ ಹೊಸ ವಿಧಾನವನ್ನು ನಾವು ಬಯಸಿದ್ದರಿಂದ Snapchat ಅನ್ನು ನಾವು ಭಿನ್ನವಾಗಿ ರೂಪಿಸಿದೆವು. ಒಂದು ಚಿತ್ರ ಸಾವಿರ ಮಾತುಗಳಿಗೆ ಸಮಾನ, ಹಾಗಾಗಿ ಜನರು Snapchat ನಲ್ಲಿ ಚಿತ್ರಗಳು ಮತ್ತು ವೀಡಿಯೊಗಳ ಜೊತೆ ಸಂವಹನ ನಡೆಸುತ್ತಾರೆ. 

ನಮ್ಮ ಆಪ್‌ನಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ನೀವು ನಿಮ್ಮ ಕಥೆಯನ್ನು ಹಂಚಿಕೊಂಡಾಗ ಸಾರ್ವಜನಿಕ ಲೈಕ್‌ಗಳು ಅಥವಾ ಕಾಮೆಂಟ್‌ಗಳು ಇರುವುದಿಲ್ಲ.

Snapchat ಪೂರ್ವನಿಯೋಜಿತವಾಗಿ ಖಾಸಗಿಯಾಗಿದೆ, ಅಂದರೆ ಜನರು ಸ್ನೇಹಿತರನ್ನು ಸೇರಿಸಲು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವರನ್ನು ಯಾರು ಸಂಪರ್ಕಿಸಬಹುದು ಎನ್ನುವುದನ್ನು ಆರಿಸಬೇಕಾಗುತ್ತದೆ.

Snapchat ಅನ್ನು ನಾವು ನಿರ್ಮಿಸಿದಾಗ ನಮ್ಮ ಸೇವೆಯ ಮೂಲಕ ಕಳುಹಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಡೀಫಾಲ್ಟ್ ಆಗಿ ಅಳಿಸಲು ನಾವು ಆಯ್ಕೆ ಮಾಡಿದ್ದೆವು. 

ರೆಕಾರ್ಡ್ ಮಾಡದಿರುವ ಫೋನ್ ಕರೆಗಳ ಗೌಪ್ಯತೆಯನ್ನು ಆನಂದಿಸಿದ ಹಿಂದಿನ ಪೀಳಿಗೆಯವರಂತೆ, ನಮ್ಮ ಪೀಳಿಗೆಯು ಪರಿಪೂರ್ಣವಲ್ಲದಿರಬಹುದಾದ ಆದರೆ ಶಾಶ್ವತತೆ ಇಲ್ಲದೆ ಭಾವನೆಗಳನ್ನು ಸಂವಹನ ಮಾಡುವ ಕ್ಷಣಗಳನ್ನು Snapchat ಮೂಲಕ ಹಂಚಿಕೊಳ್ಳುವ ಸಾಮರ್ಥ್ಯದಿಂದ ಪ್ರಯೋಜನ ಪಡೆದಿದೆ. 

Snapchat ಸಂದೇಶಗಳನ್ನು ಡೀಫಾಲ್ಟ್ ಆಗಿ ಅಳಿಸಲಾಗುತ್ತದೆಯಾದರೂ ಸಹ, ಸ್ವೀಕೃತಿದಾರರು ಚಿತ್ರಗಳು ಮತ್ತು ವೀಡಿಯೊಗಳನ್ನು ಉಳಿಸಬಹುದು ಎಂದು ನಾವು ಎಲ್ಲರಿಗೂ ತಿಳಿಸುತ್ತೇವೆ. 

ಕಾನೂನುಬಾಹಿರ ಅಥವಾ ಹಾನಿಕಾರಕ ಕಂಟೆಂಟ್‌ಗೆ ಸಂಬಂಧಿಸಿ ನಾವು ಕ್ರಮ ತೆಗೆದುಕೊಂಡಾಗ, ವಿಸ್ತರಿತ ಅವಧಿಯವರೆಗೆ ನಾವು ಸಾಕ್ಷ್ಯವನ್ನು ಉಳಿಸಿಕೊಳ್ಳುತ್ತೇವೆ, ಇದರಿಂದ ಕಾನೂನು ಜಾರಿ ಸಂಸ್ಥೆಗಳನ್ನು ಬೆಂಬಲಿಸಲು ಮತ್ತು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಮಗೆ ಸಾಧ್ಯವಾಗುತ್ತದೆ. 

Snapchat ನಲ್ಲಿ ಹಾನಿಕಾರಕ ಕಂಟೆಂಟ್ ಪ್ರಸಾರವಾಗುವುದನ್ನು ತಡೆಯಲು ಸಹಾಯ ಮಾಡುವುದಕ್ಕಾಗಿ, ಸ್ವಯಂಚಾಲಿತ ಪ್ರಕ್ರಿಯೆಗಳು ಮತ್ತು ಮಾನವ ಪರಿಶೀಲನೆಯ ಸಂಯೋಜನೆಯನ್ನು ಬಳಸಿಕೊಂಡು ನಮ್ಮ ಸೇವೆಯಲ್ಲಿ ಶಿಫಾರಸು ಮಾಡಲಾದ ಕಂಟೆಂಟ್ ಅನ್ನು ನಾವು ಅನುಮೋದಿಸುತ್ತೇವೆ. 

ನಾವು ನಮ್ಮ ಕಂಟೆಂಟ್ ನಿಯಮಗಳನ್ನು ಎಲ್ಲ ಖಾತೆಗಳಾದ್ಯಂತ ಸ್ಥಿರವಾಗಿ ಮತ್ತು ನ್ಯಾಯೋಚಿತವಾಗಿ ಅನ್ವಯಿಸುತ್ತೇವೆ. ನಾವು ಸರಿಯಾದುದನ್ನು ಮಾಡುತ್ತಿದ್ದೇವೆಯೇ ಎಂದು ಪರಿಶೀಲಿಸಲು ನಮ್ಮ ಕ್ರಮ ಜಾರಿಗೊಳಿಸುವಿಕೆಯ ಕ್ರಮಗಳನ್ನು ನಾವು ಗುಣಮಟ್ಟ ಭರವಸೆಯ ಪರೀಕ್ಷೆಗೆ ಒಡ್ಡುತ್ತೇವೆ.

ತಿಳಿದಿರುವ ಮಕ್ಕಳ ಲೈಂಗಿಕ ಶೋಷಣೆಯ ಸಾಮಗ್ರಿಗಳು, ಮಾದಕಪದಾರ್ಥ ಸಂಬಂಧಿತ ಕಂಟೆಂಟ್ ಮತ್ತು ಇತರ ವಿಧಗಳ ಹಾನಿಕಾರಕ ಕಂಟೆಂಟ್‌ಗಾಗಿಯೂ ಸಹ ನಾವು ಪೂರ್ವಭಾವಿಯಾಗಿ ತಪಾಸಣೆ ನಡೆಸುತ್ತೇವೆ, ಆ ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ, ಅಪರಾಧ ಎಸಗುವ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಸಾಧನ-ನಿರ್ಬಂಧಗೊಳಿಸುತ್ತೇವೆ, ಕಾನೂನು ಜಾರಿಗಾಗಿ ಸಾಕ್ಷ್ಯವನ್ನು ಉಳಿಸಿಕೊಳ್ಳುತ್ತೇವೆ ಮತ್ತು ಹೆಚ್ಚಿನ ಕ್ರಮಕ್ಕಾಗಿ ಕೆಲವು ಕಂಟೆಂಟ್ ಅನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡುತ್ತೇವೆ.

ಕಾಣೆಯಾದ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳಿಗಾಗಿನ ರಾಷ್ಟ್ರೀಯ ಕೇಂದ್ರಕ್ಕೆ ಕಳೆದ ವರ್ಷ ನಾವು 690,000 ವರದಿಗಳನ್ನು ಮಾಡಿದ್ದು, ಇದರಿಂದಾಗಿ 1,000 ಕ್ಕೂ ಅಧಿಕ ಅಪರಾಧಿಗಳನ್ನು ಬಂಧಿಸಲು ಸಾಧ್ಯವಾಗಿದೆ. ನಾವು 2.2 ಲಕ್ಷ ಮಾದಕಪದಾರ್ಥ ಸಂಬಂಧಿತ ಕಂಟೆಂಟ್ ಅನ್ನು ಕೂಡ ತೆಗೆದುಹಾಕಿದ್ದೇವೆ ಮತ್ತು 705,000 ಸಂಬಂಧಿಸಿದ ಖಾತೆಗಳನ್ನು ಬ್ಲಾಕ್ ಮಾಡಿದ್ದೇವೆ.

ನಮ್ಮ ಕಟ್ಟುನಿಟ್ಟಿನ ಗೌಪ್ಯತೆ ಸೆಟ್ಟಿಂಗ್‌ಗಳು, ಕಂಟೆಂಟ್ ಮಾಡರೇಷನ್ ಪ್ರಯತ್ನಗಳು, ಪೂರ್ವಭಾವಿ ಪತ್ತೆ ಮಾಡುವಿಕೆ ಮತ್ತು ಕಾನೂನು ಜಾರಿ ಸಹಭಾಗಿತ್ವದ ಹೊರತಾಗಿಯೂ ಜನರು ಆನ್‌ಲೈನ್ ಸೇವೆಗಳನ್ನು ಬಳಸಿದಾಗ ಕೆಟ್ಟ ಸಂಗತಿಗಳು ಸಂಭವಿಸಬಹುದು. ಆದಕಾರಣ ಹದಿಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನವರು Snapchat ನಲ್ಲಿ ಸಂವಹನ ನಡೆಸಲು ಇನ್ನೂ ಸಿದ್ಧರಾಗಿಲ್ಲ ಎಂದು ನಾವು ಭಾವಿಸುತ್ತೇವೆ. 

iPhone ಮತ್ತು Android ನಲ್ಲಿ ಸಾಧನ-ಮಟ್ಟದ ಪೋಷಕರ ನಿಯಂತ್ರಣಗಳನ್ನು ಬಳಸುವಂತೆ ನಾವು ಪೋಷಕರನ್ನು ಬಲವಾಗಿ ಪ್ರೋತ್ಸಾಹಿಸುತ್ತೇವೆ. ಅದನ್ನು ನಾವು ನಮ್ಮ ಮನೆಯಲ್ಲಿಯೂ ಸಹ ಬಳಸುತ್ತೇವೆ ಮತ್ತು ನಮ್ಮ ಹದಿಮೂರು ವರ್ಷದ ಮಗು ಡೌನ್‌ಲೋಡ್ ಮಾಡುವ ಪ್ರತಿಯೊಂದು ಆ್ಯಪ್ ಅನ್ನು ನನ್ನ ಪತ್ನಿ ಮೊದಲು ಅನುಮೋದಿಸುತ್ತಾಳೆ. 

ಇನ್ನಷ್ಟು ಗೋಚರತೆ ಮತ್ತು ನಿಯಂತ್ರಣ ಬಯಸುವ ಪೋಷಕರಿಗಾಗಿ, ನಾವು Snapchat ನಲ್ಲಿ ಕೌಟುಂಬಿಕ ಕೇಂದ್ರವನ್ನು ನಿರ್ಮಿಸಿದ್ದು, ಅಲ್ಲಿ ನೀವು ನಿಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ನೋಡಬಹುದು, ಗೌಪ್ಯತೆ ಸೆಟ್ಟಿಂಗ್‌ಗಳನ್ನು ವಿಮರ್ಶಿಸಬಹುದು ಮತ್ತು ಕಂಟೆಂಟ್ ಮಿತಿಗಳನ್ನು ಹೊಂದಿಸಬಹುದು.

ಮಕ್ಕಳ ಆನ್‌ಲೈನ್ ಸುರಕ್ಷತಾ ಕಾಯ್ದೆ ಮತ್ತು ಕೂಪರ್ ಡೇವಿಸ್ ಕಾಯ್ದೆಯಂತಹ ಕಾನೂನುಗಳ ಕುರಿತ ಸಮಿತಿಯ ಸದಸ್ಯರೊಂದಿಗೆ ನಾವು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದು, ಅದನ್ನು ಬೆಂಬಲಿಸುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸುವ ಶಾಸನಕ್ಕಾಗಿ ವಿಸ್ತಾರವಾದ ಉದ್ಯಮ ಬೆಂಬಲವನ್ನು ನಾನು ಪ್ರೋತ್ಸಾಹಿಸುತ್ತೇನೆ. 

ಯಾವ ಶಾಸನವೂ ಪರಿಪೂರ್ಣವಲ್ಲ ಆದರೆ ಯಾವುದೂ ಇಲ್ಲದಿರುವುದಕ್ಕಿಂತ ಒಂದಿಷ್ಟು ರಸ್ತೆಯ ನಿಯಮಗಳು ಇರುವುದು ಒಳ್ಳೆಯದು.

ನಮ್ಮ ಸೇವೆಯನ್ನು ಬಳಸುವ ಜನರನ್ನು ರಕ್ಷಿಸಲು ನಾವು ಮಾಡುತ್ತಿರುವ ಬಹುತೇಕ ಕೆಲಸಗಳು, ಉದ್ಯಮದಾದ್ಯಂತದ ನಮ್ಮ ಪಾಲುದಾರರು, ಸರ್ಕಾರ, ಲಾಭರಹಿತ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಿರ್ದಿಷ್ಟವಾಗಿ, ಜನರನ್ನು ಸುರಕ್ಷಿತವಾಗಿಡಲು ತಮ್ಮ ಬದುಕನ್ನು ಮೀಸಲಾಗಿಟ್ಟಿರುವ ಕಾನೂನು ಜಾರಿ ಅಧಿಕಾರಿಗಳು ಹಾಗೂ ಮೊದಲ ಪ್ರತಿಕ್ರಿಯಾದಾರರ ಬೆಂಬಲವಿಲ್ಲದೆ ಸಾಧ್ಯವಾಗದು. 

ತಮ್ಮ ಅಪರಾಧಗಳನ್ನು ಎಸಗಲು ಆನ್‌ಲೈನ್ ಸೇವೆಗಳನ್ನು ಬಳಸದಂತೆ ಅಪರಾಧಿಗಳನ್ನು ತಡೆಯಲು ನಮ್ಮ ದೇಶ ಮತ್ತು ವಿಶ್ವಾದ್ಯಂತ ಮಾಡಲಾಗುತ್ತಿರುವ ಅಸಾಧಾರಣ ಪ್ರಯತ್ನಗಳಿಗೆ ನಾನು ಅತ್ಯಂತ ಆಭಾರಿಯಾಗಿದ್ದೇನೆ.

ನನಗೆ ಮತ್ತು ನನ್ನ ಕುಟುಂಬಕ್ಕೆ ಈ ದೇಶವು ಒದಗಿಸಿರುವ ಅವಕಾಶಗಳಿಗಾಗಿ ನಾನು ಅಗಾಧ ಕೃತಜ್ಞ ಭಾವವನ್ನು ಹೊಂದಿದ್ದೇನೆ. ದೇಶಕ್ಕೆ ಮರಳಿ ನೀಡಲು ಮತ್ತು ಸಕಾರಾತ್ಮಕ ಬದಲಾವಣೆ ತರಲು ಬಹುಮುಖ್ಯವಾದ ಬಾಧ್ಯತೆಯನ್ನು ನಾನು ಹೊಂದಿದ್ದೇನೆ ಮತ್ತು ಈ ಮೂಲಭೂತವಾಗಿ ಮಹತ್ವದ್ದಾದ ಪ್ರಜಾತಾಂತ್ರಿಕ ಪ್ರಕ್ರಿಯೆಯ ಭಾಗವಾಗಿ ಇಲ್ಲಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ.

ಸಮಿತಿಯ ಸದಸ್ಯರೇ, ನಾವು ಆನ್‌ಲೈನ್ ಸುರಕ್ಷತೆಗಾಗಿ ಪರಿಹಾರದ ಭಾಗವಾಗಿರುತ್ತೇವೆ ಎನ್ನುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ.

ನಮ್ಮ ನ್ಯೂನತೆಗಳ ಕುರಿತು ನಾವು ಪ್ರಾಮಾಣಿಕವಾಗಿರುತ್ತೇವೆ ಮತ್ತು ಸುಧಾರಣೆಗಾಗಿ ನಾವು ನಿರಂತರ ಕೆಲಸ ಮಾಡುತ್ತೇವೆ.

ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ಉತ್ಸುಕನಾಗಿದ್ದೇನೆ.

ಸುದ್ದಿಗೆ ಹಿಂತಿರುಗಿ